ರೈತ ಸಂಜೀವಿನಿ ಯೋಜನೆಯಡಿ ರೈತ ಕುಟುಂಬಗಳಿಗೆ 6 ಲಕ್ಷ ರೂ.ಪರಿಹಾರ ವಿತರಣೆ: ಕೆ.ಎಸ್.ನಾಗೇಶ್

Update: 2017-09-19 17:33 GMT

ಮದ್ದೂರು, ಸೆ.19: ಕೃಷಿ ಚಟುವಟಿಕೆ ಸಂದರ್ಭದಲ್ಲಿ ಆಕಸ್ಮಿಕ ಮರಣಕ್ಕೆ ಒಳಗಾದ ತಾಲೂಕಿನ ರೈತ ಕುಟುಂಬಗಳಿಗೆ ರೈತ ಸಂಜೀವಿನಿ ಯೋಜನೆಯಡಿಯಲ್ಲಿ ಸುಮಾರು 6 ಲಕ್ಷ ರೂ.ಪರಿಹಾರ ಧನ ವಿತರಣೆ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದ್ದಾರೆ.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕಿನ ಡಿ.ಹೊಸೂರು ಗ್ರಾಮದ ರೈತ ರಾಮಲಿಂಗಯ್ಯ ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಧನ ವಿತರಿಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಲ್ಲಿ ಒಟ್ಟು ಎಂಟು ಪ್ರಕರಣಗಳಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಹಾಗೂ ಇತರೆ ಅಂಗ ವಿಕಲ ರೈತರಿಗೆ ಒಟ್ಟು 6.10 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು. 

ಎಳನೀರು ಮಾರುಕಟ್ಟೆಯ ಮುಚ್ಚಿದ ಹರಾಜು ಕಟ್ಟೆ ಪ್ರಾಂಗಣ ನಿರ್ಮಾಣಕ್ಕಾಗಿ ನಾಬಾರ್ಡ್ ವತಿಯಿಂದ 1ಕೋಟಿ ರೂ. ಹಣ ಬಿಡುಗಡೆಯಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಾರುಕಟ್ಟೆ ಆವರಣದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷೆ ಮಮತಾ ಶಂಕರೇಗೌಡ, ಸದಸ್ಯರಾದ ಅಜ್ಜಹಳ್ಳಿರಾಮಕೃಷ್ಣ, ಸಿ.ರಾಜು, ಎಂ.ಡಿ.ಪ್ರಕಾಶ್, ಮಹೇಂದ್ರ, ಕಾರ್ಯದರ್ಶಿ ಶ್ರೀಕಂಠಪ್ರಭು, ಸಹಕಾರ್ಯದರ್ಶಿ ನಾಗೇಶ್ ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News