ಬಿಜೆಪಿ ಮುಖಂಡ ಸುರೇಶ್‍ಕುಮಾರ್ ಹೇಳಿಕೆಗೆ ತೀವ್ರ ಆಕ್ಷೇಪ

Update: 2017-09-19 18:12 GMT

ಶಿವಮೊಗ್ಗ, ಸೆ.19: ಪತ್ರಕರ್ತೆ, ವಿಚಾರವಾದಿ ಹಾಗೂ ಚಿಂತಕಿ ಗೌರಿ ಲಂಕೇಶ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯನ್ನು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮ ಎಂದು ಟೀಕಿಸಿರುವ ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಸುರೇಶ್‍ಕುಮಾರ್ ಹೇಳಿಕೆಯನ್ನು ಗೌರಿ ಹತ್ಯೆ ವಿರೋಧಿ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಕೆ.ಪಿ. ಶ್ರೀಪಾಲ್, ಬೆಂಗಳೂರಿನಲ್ಲಿ ಸೆ. 12ರಂದು ನಡೆದ ಹೋರಾಟದ ಸಂದರ್ಭದಲ್ಲಿ ಎಲ್ಲರೂ ಕೂಡ ಸ್ವಯಂ ಪ್ರೇರಿತರಾಗಿ ಹಣ ನೀಡಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಆರ್.ಅಶೋಕ್ ಹಾಗೂ ಸುರೇಶ್‍ಕುಮಾರ್ ಕಾಂಗ್ರೆಸ್ ಪ್ರಾಯೋಜಿತ ಎಂದು ಹೇಳಿರುವುದು ಅವರ ಮನ:ಸ್ಥಿತಿಯನ್ನು ತೋರಿಸುತ್ತದೆ ಎಂದರು.

ಶಿವಮೊಗ್ಗ ನಗರದಲ್ಲಿ ಸೆ.14 ರಂದು ಗೌರಿ ಹತ್ಯೆ ಖಂಡಿಸಿ ನಮ್ಮ ಒಕ್ಕೂಟದಿಂದ ನಡೆದ ಪಂಜಿನ ಮೆರವಣಿಗೆಗೂ ಸ್ಥಳದಲ್ಲಿಯೇ ಹಣವನ್ನು ಸಂಗ್ರಹಿಸಲಾಯಿತು. ಒಟ್ಟು 19,400 ರೂ. ಶೇಖರಣೆಯಾಯಿತು. ದರಲ್ಲಿ 14,400 ರೂ. ಮೈಕ್, ಪ್ಲೆಕ್ಸ್, ಸ್ಟೇಜ್ ಮುಂತಾದವರುಗಳಿಗೆ ವೆಚ್ಚವಾಯಿತು. ಉಳಿದ 5000 ರೂ. ಅಂಬೇಡ್ಕರ್ ಕಾಲನಿಯಲ್ಲಿರುವ ಹಕ್ಕಿಪಿಕ್ಕಿ ನಿವಾಸಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಗೌರಿ ಲಂಕೇಶ ಬಗ್ಗೆ ಕೆಳ ಸಮುದಾಯದಿಂದ ಎಲ್ಲಾ ವರ್ಗದ ಜನರ ಬೆಂಬಲವಿದೆ. ಇದರಿಂದಾಗಿಯೇ ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ ಎಂದ ಅವರು, ಸುರೇಶ್‍ಕುಮಾರ್ ಅಂತಹ ಒಬ್ಬ ಸಜ್ಜನಿಕೆಯ ವ್ಯಕ್ತಿ ಸಾವನ್ನು ಸಂಭ್ರಮಿಸುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಬಿಜೆಪಿಯಲ್ಲಿ ತಾನು ಕಳೆದುಹೋಗುತ್ತಿರುವ ಭಯದಿಂದ ಸುರೇಶ್‍ಕುಮಾರ್, ಅಸ್ತಿತ್ವವನ್ನು ತೋರಿಸುವುದಕ್ಕಾಗಿ ಗೌರಿ ಹತ್ಯೆ ವಿರೋಧಿ ಪ್ರತಿಭಟನೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದರು.

ಕೆ.ಎಲ್. ಅಶೋಕ್ ಮಾತನಾಡಿ, ವಿಕೃತ ಮನಸ್ಸು ಮಾತ್ರ ಸಾವನ್ನು ಸಂಭ್ರಮಿಸುತ್ತದೆ. ಇದನ್ನು ಖಂಡಿಸದವರು ಪರೋಕ್ಷವಾಗಿ ಸಾವನ್ನು ಸಮರ್ಥಿಸಿಕೊಡಂತಾಗುತ್ತದೆ. ಸುರೇಶ್‍ಕುಮಾರ್ ಸಜ್ಜನ ರಾಜಕಾರಣಿ ಎನ್ನುವುದನ್ನು ಇಲ್ಲಿಯವರೆಗೆ ತಿಳಿಯಲಾಗಿತ್ತು. ಆದರೆ ಕಾಂಗ್ರೆಸ್ ಪ್ರಾಯೋಜಿತ ಹೋರಾಟ ಎನ್ನುವ ಮೂಲಕ ತಮ್ಮ ಮುಖವಾಡ ಕಳಚಿಕೊಂಡಿದ್ದಾರೆ ಎಂದರು.

ಡಿಎಸ್‍ಎಸ್ ಮುಖಂಡ ಗುರುಮೂರ್ತಿ ಮಾತನಾಡಿ, ಗೌರಿ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಕಾಂಗ್ರೆಸ್ ಪ್ರಾಯೋಜಿತ ಎನ್ನುವುದಾದರೆ  ಇವರ ನಿಲುವು ಏನು ಎಂಬುದು ಅರ್ಥವಾಗುತ್ತದೆ. ತಮ್ಮ ಕಚೇರಿಯಲ್ಲಿ ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಭಾವಚಿತ್ರವನ್ನು ಹಾಕದ ಇವರ ಔಚಿತ್ಯವನ್ನು ನಾವು ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕೆ.ಎಲ್. ಅಶೋಕ್, ಎನ್.ಮಂಜುನಾಥ್, ಶಿವಕುಮಾರ್, ಚಂದ್ರೇಗೌಡ ಮುಂತಾದವರು ಉಪಸ್ಥಿತರಿದ್ದರು.

ಪ್ರಜ್ಞಾವಂತ ರಾಜಕಾರಣಿ ಸುರೇಶ್‍ಕುಮಾರ್ ಹೇಳಿಕೆ ಖಂಡನಾರ್ಹ. ಗೌರಿ ಹತ್ಯೆಯನ್ನು ಕನಿಷ್ಠ ಖಂಡಿಸಲೂ ಆಗದವರುನ್ನು ಪ್ರಜ್ಞಾವಂತರೆನ್ನಬೇಕೆ ಎನ್ನುವ ಸಂಶಯ ಉಂಟಾಗಿದೆ. ಹತ್ಯೆ ಸಂಭ್ರಮಿಸಿದ್ದನ್ನೂ ಖಂಡಿಸದ ಅವರಲ್ಲಿ ಮಾನವೀಯತೆಯ ಸೆಲೆ ಬತ್ತುತ್ತಿದೆ ಎನ್ನುವುದರ ಅರಿವಾಗುತ್ತಿದೆ. ಗೌರಿ ಸಾವಿನಲ್ಲಿ ಎಲ್ಲವೂ ಅಂತ್ಯವಾಗಬೇಕಿತ್ತು. ಆದರೆ ಅವರು ನೀಡುತ್ತಿರುವ ಪ್ರತಿಕ್ರಿಯೆಯಿಂದ ಅಪರಾಧಿಯಾಗುತ್ತಿದ್ದಾರೆ.

-ಚಂದ್ರೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News