ಭಟ್ಕಳ ಪುರಸಭೆ ಕಟ್ಟಡಕ್ಕೆ ಕಲ್ಲು ತೂರಾಟ ಪ್ರಕರಣ: ಬಿಜೆಪಿ ಮುಖಂಡ ಗೋವಿಂದ ನಾಯ್ಕ ಸೇರಿದಂತೆ ನಾಲ್ವರ ಬಂಧನ
ಭಟ್ಕಳ, ಸೆ.20: ಯಾವುದೇ ಕಾರಣಕ್ಕೂ ಇಲ್ಲಿನ ಬಿಜೆಪಿ ಮುಖಂಡ, ಕಳೆದ ಬಾರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಲನ್ನು ಕಂಡ ಗೋವಿಂದ ನಾಯ್ಕರನ್ನು ಬಂಧಿಸಕೂಡದು ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿನ ಡಿವೈಎಸ್ಪಿ ಶಿವಕುಮಾರ್ ಗೆ ತಾಕೀತು ಮಾಡಿದ ಬೆನ್ನಲ್ಲೇ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದ ಪೊಲೀಸರು ಹನುಮಾನ ನಗರದ ಗೋವಿಂದ ನಾಯ್ಕ, ಆಸರಕೇರಿ ಕೃಷ್ಣ ಸೇರಿದಂತೆ ನಾಲ್ವರನ್ನು ಬುಧವಾರ ಬಂಧಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಭಟ್ಕಳದಲ್ಲಿ ಪುರಸಭೆ ಅಂಗಡಿ ಕಬ್ಜಾ ಪಡೆಯುವ ಸಂದರ್ಭದಲ್ಲಿ ಅಂಗಡಿ ಮಾಲಕನೊಬ್ಬ ಸೀಮಿಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಬಲವಾಗಿ ಪ್ರತಿರೋಧಿಸಿದ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಸೇರಿ ಪುರಸಭೆ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸುವುದರ ಮೂಲಕ ಪುರಸಭೆಗೆ ಅಪಾರ ನಷ್ಟವನ್ನುಂಟು ಮಾಡಿದ್ದರು. ಅಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರನ್ನು ಎಳೆದಾಡಿ ಅವರ ಹಲ್ಲೆಗೂ ಮುಂದಾಗಿದ್ದರು ಎಂದು ನಗರಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ದೂರಿನ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಕಲ್ಲುತೂರಾಟದ ದೃಶ್ಯವಳಿಯನ್ನು ಮುಂದಿಟ್ಟು ಕೊಂಡಿರುವ ಪೊಲೀಸರು ಸುಮಾರು 64ಕ್ಕೂ ಹೆಚ್ಚು ಕಲ್ಲು ತೂರಾಟಗಾರರ ಮೇಲೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ ಪೊಲೀಸರು ಇದುವರೆಗೂ ಒಟ್ಟು13ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ಭಟ್ಕಳಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಡಿವೈಎಸ್ಪಿ ಶಿವಕುಮಾರನ್ನು ಠಾಣೆಯಲ್ಲಿ ಭೇಟಿಯಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದೀರಿ ಅದನ್ನು ಕೈಬಿಡಬೇಕು ಹಾಗೂ ಇಲ್ಲಿಯವರೆಗೆ ಬಂಧನ ಮಾಡಿದ ಕಾರ್ಯಕರ್ತರ ಮೇಲೆ ಸಣ್ಣಪುಟ್ಟ ಕೇಸು ದಾಖಲಿಸಬೇಕು. ಮುಖಂಡ ಗೋವಿಂದ ನಾಯ್ಕನನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು. ಒಂದು ವೇಳೆ ಬಂಧಿಸಿದರೆ ಪರಿಣಾಮ ನೆಟ್ಟಗಿರಲ್ಲ ನಾನೇ ಸ್ವತಃ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ತಾಕೀತು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಎಸ್ಪಿ ಶಿವಕುಮಾರ್, ಕಳೆದ ಒಂದು ವರ್ಷದಿಂದ ನಾವು ಬಿಜೆಪಿಯವರಿಗೆ ಸಹಕರಿಸುತ್ತ ಬಂದಿದ್ದೇವೆ. ಕಳೆದ ಗುರುವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಮ್ಮ ಸಿಬ್ಬಂದಿಗಳ ಮುಬೈಲ್ , ಕ್ಯಾಮರಾವನ್ನು ಕಿತ್ತುಕೊಂಡಿದ್ದಾರೆ ಇದರ ದಾಖಲೆಯೂ ನಮ್ಮ ಬಳಿ ಇದೆ ಎಂದುತಮ್ಮ ಅಳಲನ್ನು ತೋಡಿಕೊಂಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ಸಂಸದರ ಬೆದರಿಕೆಯ ಮಾತುಗಳಿಗೆ ಮಣಿಯದ ಪೊಲೀಸರು ಮಂಗಳವಾರ ರಾತ್ರಿಯೊಳಗೆ ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಮಂಜುನಾಥ್ ನಾಯ್ಕಜಾಲಿ ಹಾಗೂ ಆನಂದ ನಾಯ್ಕರನ್ನು ಬಂಧಿಸಿದ್ದು, ಇದುವರೆಗೂ ಬಂಧಿತರ ಸಂಖ್ಯೆ 13ಕ್ಕೇರಿದೆ ಎಂದು ತಿಳಿದು ಬಂದಿದೆ.