ವಿಗ್ರಹ ವಿಸರ್ಜನೆಯಿಂದ ಕುಡಿಯುವ ನೀರು ಕಲುಷಿತ: ಸ್ಥಳೀಯರ ಆರೋಪ
ಮೂಡಿಗೆರೆ, ಸೆ.20: ಬೀಜವಳ್ಳಿ ಹಳ್ಳದಲ್ಲಿ ಗಣಪತಿ ವಿಗ್ರಹಗಳನ್ನು ವಿಸರ್ಜಿಸುವುದರಿಂದ ಕುಡಿಯುವ ನೀರು ಕಲುಷಿತಗೊಂಡು ವಿಷಕಾರಿಯಗಿದೆ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ.
ಬೀಜವಳ್ಳಿಯ ಸುಂಡಕೆರೆ ಹಳ್ಳದಿಂದ ಪಟ್ಟಣದ ನಿವಾಸಿಗಳಿಗೆ ಪಪಂಯಿಂದ ಪ್ರತಿದಿನ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದಕ್ಕಾಗಿ ಸುಂಡಕೆರೆ ಹಳ್ಳದಲ್ಲಿ ಚೆಕ್‍ಡ್ಯಾಮ್ ಒಂದನ್ನು ನಿರ್ಮಿಸಿ ನೀರನ್ನು ತಡೆಯಿಡಿದಿರುವುದರಿಂದ ಸುಮಾರು 5 ಅಡಿಗಳಷ್ಟು ಆಳದಿಂದ ನೀರು ಶೇಖರಣೆಯಾಗಿ ನಿಂತಿದೆ. ಅಲ್ಲಿ ಗುಂಡಿ ಇರುವ ಕಾರಣ ಗಣಪತಿ ವಿಗ್ರಹಗಳನ್ನು ಅದೇ ಗುಂಡಿಯಲ್ಲಿ ವಿಸರ್ಜಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಗ್ರಹಗಳ ಬಣ್ಣದಲ್ಲಿ ಬಾರಿ ಪ್ರಮಾಣದ ವಿಷಕಾರಕ ಅಂಶವಿರುವುದರಿಂದ ವಿಸರ್ಜನೆಗೊಂಡ ವಿಗ್ರಹಗಳಿಂದ ನೀರೆಲ್ಲಾ ಮಲೀನವಾಗಿದ್ದು, ಕುಡಿಯಲು ಯೋಗ್ಯವಲ್ಲ. ಪಿಯೋಪಿ ವಿಗ್ರಹಗಳನ್ನು ಬಳಸದಂತೆ ಹಾಗೂ ಕುಡಿಯುವ ನೀರಿಗೆ ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡಬಾರದೆಂಬ ನಿಯಮವಿದೆ. ಆದರೂ ಇಂತಹ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಾಲೂಕು ಆಡಳಿತ ಪರವಾನಗಿ ಕೊಡುತ್ತಿರುವುದರಿಂದ ಹಾಗೂ ಕುಡಿಯುವ ನೀರು ಪೂರೈಕೆ ಮಾಡುವ ಹಳ್ಳದಲ್ಲಿ ವಿಗ್ರಹಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡುತ್ತಿರುವುದರಿಂದ ಕುಡಿಯುವ ನೀರು ಮಲೀನಗೊಳ್ಳಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಪಂ ಅಧಿಕಾರಿಗಳಾಗಲಿ, ತಹಶೀಲ್ದಾರ್ ಆಗಲಿ ಇಂತಹ ಕಲುಷಿತ ನೀರನ್ನು ಪರಿಶೀಲಿಸುವ ಗೋಜಿಗೆ ಹೋಗದಿರುವುದರಿಂದ ಪಟ್ಟಣದ ನಿವಾಸಿಗಗಳು ಕಲುಷಿತ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ವಿಸರ್ಜನೆಗೊಳಿಸಿದ ಗಣಪತಿ ವಿಗ್ರಹಗಳನ್ನು ಕೂಡಲೇ ಸುಂಡಕೆರೆ ಹಳ್ಳದಿಂದ ತೆರವುಗೊಳಿಸಿ, ಕುಡಿಯಲು ಪೂರೈಕೆ ಮಾಡುವ ನೀರನ್ನು ಶುದ್ಧೀಕರಿಸಬೇಕೆಂದು ಸ್ಥಳೀಯರು ಪಪಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.