ದಸರಾ ದರ್ಬಾರ್‍ಗೆ ಕಡೂರು ಕ್ಷೇತ್ರ ಸರ್ವ ಸನ್ನದ್ಧ: ವೈ.ಎಸ್.ವಿ.ದತ್ತ
ಕಡೂರು, ಸೆ.20: ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣದಲ್ಲಿ ಸೆ.21 ರಿಂದ 30ರವರೆಗೆ ನಡೆಯುವ ರಂಭಾಪುರಿ ಜಗದ್ಗುಗಳುಗಳ ದಸರಾ ದರ್ಬಾರ್‍ಗೆ ಅಥಿತೇಯ ಕಡೂರು ಕ್ಷೇತ್ರ ಸರ್ವ ಸನ್ನದ್ಧವಾಗಿ ಸಜ್ಜುಗೊಂಡಿದೆ ಎಂದು ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.
ಬುಧವಾರ ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಸಜ್ಜುಗೊಂಡಿರುವ ಮಂಟಪ ಹಾಗೂ ದಾಸೋಹ ತಯಾರಿಯನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತೀ ದಿನ ರಾತ್ರಿ ಸಂಜೆ 7 ರಿಂದ ನಡೆಯುವ ಧಾರ್ಮಿಕ ಸಮ್ಮೇಳನಕ್ಕೆ ನಿರೀಕ್ಷೆಗೆ ತಕ್ಕಂತೆ ಜನರು ಆಗಮಿಸುವ ನಿರೀಕ್ಷೆಯಿದೆ, ಇದಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ವ್ಯವಸ್ಥಿತವಾದ ಮಂಟಪ, ವೇದಿಕೆ, 5 ಸಾವಿರ ಅಸನ ವ್ಯವಸ್ಥೆ, ವೇದಿಕೆಯ ಎಡ ಭಾಗದಲ್ಲಿ ವಿಐಪಿಗಳಿಗೆ ಮಹಿಳಾ ಅಥಿತಿಗಳಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಾರ್ವಜನಿಕರಿಗೂ ತಾತ್ಕಲಿಕ 20 ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆಗಮಿಸುವ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನ ಗಳಿಗೆ ಪ್ರತ್ಯೇಕ ನಿಲುಗಡೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ವಿಶೇಷ ಬಸ್ ಸಂಚಾರ ಕಲ್ಪಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರೊಂದಿಗೆ ಮಾತುಕತೆ ನಡೆಸಿ ವಿಶೆಷ ಕಲಾತಂಡಗಳ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾರ್ಯಕ್ರಮವನ್ನು ಉದ್ಟಾಟಿಸಲಿದ್ದಾರೆ ಎಂದು ವಿವರಿಸಿದರು.
ಈ ವೇಳೆ ನಿತ್ಯ ದಾಸೋಹ ನಡೆಸಲು ನಿರ್ಮಿಸಿರುವ ಪೆಂಡಾಲ್‍ನಲ್ಲಿ ಹಾಲು ಉಕ್ಕಿಸುವ ಮೂಲಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಶಾಖ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿ, ಮಹೋತ್ಸವದ ಕಾರ್ಯಾಧ್ಯಕ್ಷ ಬೆಳ್ಳಿಪ್ರಕಾಶ್, ದಾಸೋಹ ಸಮಿತಿ ಅಧ್ಯಕ್ಷ ಪ್ರೇಮ್‍ಕುಮಾರ್, ಕೋಶಾಧ್ಯಕ್ಷ ಪಂಚನಹಳ್ಳಿ ಬಾಬಣ್ಣ, ಹೆಚ್.ಎಂ. ಲೋಕೇಶ್, ಕೋಡಿಹಳ್ಳಿ ಮಹೇಶ್, ಭಂಡಾರಿಶ್ರೀನಿವಾಸ್ ಉಪಸ್ಥಿತರಿದ್ದರು.