ಸೆ.22 ರಂದು ಪಾಂಡವಪುರದಲ್ಲಿ ರೈತರ ಅಧಿವೇಶನ: ಕೆ.ಎಸ್.ಪುಟ್ಟಣ್ಣಯ್ಯ

Update: 2017-09-20 17:25 GMT

ಮಂಡ್ಯ, ಸೆ.20: ನವೆಂಬರ್ 20ರ ದೆಹಲಿಯ ರೈತ ಸಂಸತ್‍ಗೆ ಪೂರ್ವಭಾವಿಯಾಗಿ ಕೈಗೊಂಡಿರುವ ದಕ್ಷಿಣ ಭಾರತ ಜಾಥಾ ಸೆ.22 ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಅಂದು ಪಾಂಡವಪುರದಲ್ಲಿ ಬೃಹತ್ ಬಹಿರಂಗ ಅಧಿವೇಶನ ಆಯೋಜಿಸಲಾಗಿದೆ ಎಂದು ಶಾಸಕ ಹಾಗೂ ರೈತ ಸಂಘದ ವರಿಷ್ಠ ಕೆ.ಎಸ್.ಪ್ಮಟ್ಟಣ್ಣಯ್ಯ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಪಾಂಡವಪುರದ ಐದು ದೀಪಗಲ ವೃತ್ತದಿಂದ ಮೆರವಣಿಗೆ   ನಡೆಯಲಿದ್ದು, ಬಳಿಕ ಪಾಂಡವ ಕ್ರೀಡಾಂಗಣದಲ್ಲಿ ಅಧಿವೇಶನ ನಡೆಯಲಿದೆ. ಸುಮಾರು 30 ಸಾವಿರ ರೈತರು ಭಾಗವಹಿಸಲಿದ್ದು, ಯೋಗೇಂದ್ರ ಯಾದವ್, ಡಾ.ವಿಜುಕೃಷ್ಣನ್ ಸೇರಿದಂತೆ ಹಲವು ಚಿಂತಕರು, ಹೋರಾಟಗಾರರು ಮಾತನಾಡಲಿದ್ದಾರೆ ಎಂದರು.

ದೇಶದ ಹಲವು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ ರೂಪಿಸಲಾಗಿದ್ದು, ಸಾಲದಿಂದ ಸಂಪೂರ್ಣ ಮುಕ್ತಿ ಮತ್ತು ಪ್ರತಿಫಲದಾಯಕ ಬೆಲೆ ಘೋಷಣೆಯಡಿ ನ.20ರಂದು ದೆಹಲಿಯಲ್ಲಿ ರೈತ ಸಂಸತ್ ನಡೆಯಲಿದೆ. ಇದರ ಪೂರ್ವಭಾವಿಯಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ರೈತ ಮುಕ್ತಿ ಜಾಥಾ ಆಯೋಜಿಸಲಾಗಿದೆ ಎಂದು ಹೇಳಿದರು.

ಸೆ.16ರಂದು ತೆಲಂಗಾಣದಿಂದ ಆರಂಭವಾಗಿರುವ ಜಾಥಾವು ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳಗಳನ್ನು ಹಾದು ಸೆ.22, 23 ಮತ್ತು 24 ರಂದು ಕರ್ನಾಟಕದಲ್ಲಿ ಸಂಚರಿಸಲಿದೆ. ಸೆ.22 ರಂದು ಬೆಳಗ್ಗೆ ಗುಂಡ್ಲುಪೇಟೆ, ಮೈಸೂರು ಮಾರ್ಗವಾಗಿ ಪಾಚಿಡವಪುರಕ್ಕೆ ಆಗಮಿಸಲಿದೆ ಎಂದು ಅವರು, ಗೇಣುದಾರರು, ಹೈನುಗಾರಿಕೆ, ಪಶು ಸಾಗಾಣಿಕೆ ಮಾಡುವವರು, ಮಹಿಳಾ ರೈತರು, ಆದಿವಾಸಿ ಮತ್ತು ದಲಿತ ರೈತರು, ಕೃಷಿ ಕಾರ್ಮಿಕರ ಸೇರಿದಂತೆ ರೈತರನ್ನು ಎಲ್ಲ ಬಗೆಯ ಸಾಲಗಳಿಂದ ಮುಕ್ತಿಗೊಳಿಸುವುದು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಲ್ಲ ಬೆಳೆಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟ ಸೇರಿಸಿ ಪಡೆಯುವುದು ರೈತರ ಹಕ್ಕೆಂದು ಪರಿಗಣಿಸುವುದು ರೈತ ಸಂಘಟನೆಗಳ ಐಕ್ಯ ವೇದಿಕೆಯಾದ ಅಖಿಲ ಭಾರತ ರೈತಹೋರಾಟ ಸಮನ್ವಯ ಸಮಿತಿಯ ಎರಡು ಪ್ರಮುಖ ಹಕ್ಕೊತ್ತಾಯಗಳಾಗಿವೆ ಎಂದು ವಿವರಿಸಿದರು.

ದೇಶದ ವಿವಿಧ ಭಾಗಗಳಲ್ಲಿ ಜಾಥಾ ನಡೆಸಿದ ಬಳಿಕ, ನ.20 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ರೈತ ಮುಕ್ತಿ ಸಂಸತ್‍ಲ್ಲಿ ಕೊನೆಗೊಳ್ಳಲಿದೆ. ಆ ಸಂದರ್ಭದಲ್ಲಿ ಸಂಸತ್‍ನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ರೈತರ ಎರಡು ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಡಲಾಗುವುದು. ಅಧಿವೇಶನ ನಡೆಯುವಷ್ಟು ದಿನವೂ ರೈತ ಸಂಸತ್‍ನಲ್ಲಿ ಚಿಂತನ-ಮಂಥನ ಹಾಗು ಸರಕಾರಕ್ಕೆ ಒತ್ತಾಯ ಮಾಡುವುದು ಮುಂದುವರಿಯುತ್ತದೆ ಎಂದರು.

ರೈತರ ಆತ್ಮಹತ್ಯೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಶೇ.70ರಷ್ಟು ತೆರಿಗೆ ಕೃಷಿ ಮೂಲಕವೇ ಸರಕಾರಗಳ ಬೊಕ್ಕಸಕ್ಕೆ ಬರುತ್ತದೆ. ಆದರೆ, ರೈತರನ್ನು ಎಲ್ಲ ಪಕ್ಷಗಳು ಸರಕಾರಗಳು ಕಡೆಗಣಿಸಿವೆ. ರೈತರು ಗುಳೇ ಹೋಗುತ್ತಿದ್ದಾರೆ. ಹಣ ನೀಡಿ ಮತ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಸರಕಾರಕ್ಕೆ ಒತ್ತಡ ತರಬೇಕಾಗಿದೆ. ಆದ್ದರಿಂದ ಈ ಹೋರಾಟದಲ್ಲಿ ರೈತರು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

 ಸುದ್ದಿಗೋಷ್ಠಿಯಲ್ಲಿ ಬಿ.ಬೊಮ್ಮೇಗೌಡ, ನಾಗಣ್ಣ ಮತ್ತು ಲತಾ ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News