ಅ.1 ರಂದು ಪ್ರೊ.ಬಿ.ಕೃಷ್ಣಪ್ಪ ಸ್ಮಾರಕ ಭವನ ಲೋಕಾರ್ಪಣೆ: ಸಚಿವ ಎಚ್. ಆಂಜನೇಯ

Update: 2017-09-20 18:05 GMT

ದಾವಣಗೆರೆ, ಸೆ.20: ಶೋಷಿತ ವರ್ಗದ ದನಿ, ಕರ್ನಾಟಕದ ಎರಡನೇ ಅಂಬೇಡ್ಕರ್ ಎಂದೇ ಹೆಸರುವಾಸಿಯಾಗಿದ್ದ ಪ್ರೊ. ಬಿ. ಕೃಷ್ಣಪ್ಪ ಸ್ಮಾರಕ ಭವನ ಸಿದ್ಧಗೊಂಡಿದ್ದು, ಅಕ್ಟೋಬರ್ 1ರಂದು ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಹರಿಹರ ತಾಲೂಕಿನ ಹನಗವಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಸುಮಾರು 260 ಲಕ್ಷ ರೂ.ವೆಚ್ಚದಲ್ಲಿ ಪ್ರೊ.ಬಿ. ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಲಾಗಿದ್ದು, ಇದರಲ್ಲಿ ತರಬೇತಿ ಶಿಬಿರ, ಕ್ಯಾಂಪ್, ನಾಟಕ, ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡುವ ಕ್ಷೇತ್ರ ಇದಾಗಲಿದೆ ಎಂದ ಅವರು, ಅ.1ರಂದು ನಡೆವ ಕಾರ್ಯಕ್ರಮಕ್ಕೆ ಗಣ್ಯರಾದ ಎಚ್. ಮಹಾದೇವಪ್ಪ, ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.

 70ರ ದಶಕದಲ್ಲಿ ಹೋರಾಟದ ಕಿಚ್ಚು ಹಚ್ಚಿ, ಅಸಮಾನತೆ ವಿರುದ್ಧ ತೊಡೆತಟ್ಟಿ ನಿಂತ ದಿನಗಳಲ್ಲಿ ಹರಿಹರದ ಪ್ರೊ. ಬಿ. ಕೃಷ್ಣಪ್ಪ ಅವರ ಪಾತ್ರ ಪ್ರಮುಖವಾದದ್ದು, ದಲಿತ ಸಂಘರ್ಷ ಸಮಿತಿಯಲ್ಲಿ ಪ್ರಮುಖರಾಗಿದ್ದ ಕೃಷ್ಣಪ್ಪ, ರಾಜ್ಯಾದ್ಯಂತ ದಲಿತರಲ್ಲಿ ಆತ್ಮಗೌರವ, ಛಲ, ಹೋರಾಟ ಮನೋಭಾವ ಬೆಳೆಸಿದವರು. ಇಂತಹ ವ್ಯಕ್ತಿಯ ಹೆಸರಿನಲ್ಲಿ ಸ್ಮಾರಕ ಭವನ ನಿರ್ಮಿಸುವಂತೆ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ನೀಡಿದ ಮನವಿಯಂತೆ ಸರ್ಕಾರದಿಂದ 2013-14ನೆ ಸಾಲಿನ ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ 100 ಲಕ್ಷ ರೂ., 2014-15ರಲ್ಲಿ 100 ಲಕ್ಷ ರೂ., 2016-17ನೆ ಸಾಲಿನಲ್ಲಿ 50 ಲಕ್ಷ ರೂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಲಕ್ಷ ರೂ.ಸೇರಿ 260 ಲಕ್ಷ ರೂ.ವೆಚ್ಚದಲ್ಲಿ ಕಟ್ಟದ ನಿರ್ಮಿಸಿದೆ ಎಂದರು.

ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನಿಗದಿಯಾಗಿಲ್ಲ. 2-3 ಜಾಗ ಪರಿಶೀಲಿಸಲಾಗಿದೆ. ಹೈಸ್ಕೂಲ್ ಮೈದಾನದ ಟೆನ್ನಿಸ್ ಅಂಕಣ, ಎಸಿ ಕಚೇರಿ ಪಕ್ಕದ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಜಾಗ ಹಾಗೂ ಪಾಲಿಕೆ ಹಿಂಭಾಗದ ಜಾಗ ಹೀಗೆ 3 ಕಡೆ ಸ್ಥಳ ಪರಿಶಿಲಿಸಿದ್ದು, ಇನ್ನೂ ಅಂತಿಮಗೊಳಿಸಿಲ್ಲ. ಈ ಬಗ್ಗೆ ಸಚಿವ ಮಲ್ಲಿಕಾರ್ಜುನ್‍ರ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹನಗವಾಡಿ ರುದ್ರಪ್ಪ, ಇಂದಿರಾಕೃಷ್ಣಪ್ಪ, ಕಟ್ಟಡ ವಿನ್ಯಾಸಕಾರ ಸಿ. ಚಂದ್ರಶೇಖರ್, ದಲಿತ ಮುಖಂಡ ಮಾವಳ್ಳಿ ಶಂಕರ್, ಕಾಂಗ್ರೆಸ್ ಮುಖಂಡ ರಾಮಪ್ಪ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಎಸ್ಪಿ ಭೀಮಾಶಂಕರ್ ಎಸ್. ಗುಳೇದ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News