​ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಮಹಾಸಭೆ

Update: 2017-09-21 17:36 GMT

ಮಡಿಕೇರಿ, ಸೆ.21: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ 2016-17ನೆ ಸಾಲಿನಲ್ಲಿ 39.72 ಲಕ್ಷ ರೂ. ಲಾಭ ಗಳಿಸಿದ್ದು, ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರು ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.

ನಗರದಲ್ಲಿ ನಡೆದ ಸಂಘದ 16ನೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

2017 ಮಾರ್ಚ್ 31ಕ್ಕೆ ವಿವಿಧ ಠೇವಣಿಗಳಿಂದ 62.06 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, 8.58 ಕೋಟಿ ವಿವಿಧ ಸಾಲಗಳನ್ನು ನೀಡಲಾಗಿದೆ. ಪ್ರಸ್ತುತ ವರ್ಷದ ಮಾರ್ಚ್ ಅಂತ್ಯಕ್ಕೆ ಶೇ.93 ರಷ್ಟು ಸಾಲ ವಸೂಲಾತಿಯಾಗಿದೆ ಎಂದು ಮಾಹಿತಿ ನೀಡಿದರು.

1822 ಸದಸ್ಯರನ್ನು ಹೊಂದಿರುವ ಸಂಘ 62.03 ಲಕ್ಷ ರೂ. ಪಾಲು ಬಂಡವಾಳವನ್ನು ಸಂಗ್ರಹಿಸಿದೆ. 2014-15ನೇ ಸಾಲಿನಲ್ಲಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘ ಸ್ವಂತ ಕಟ್ಟಡವೊಂದನ್ನು ಖರೀದಿಸಿದೆ. ಮೇಲಂತಸ್ತಿನಲ್ಲಿ ಸಭೆ ಸಮಾರಂಭಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
 
ಸ್ವಂತ ಕಟ್ಟಡದಲ್ಲಿ ಕಚೇರಿ: ಪ್ರಸ್ತುತ ಸಂಘದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಂಘದ ಮುಖ್ಯ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದೆಂದು ಅವರು ಇದೇ ಸಂದರ್ಭ ತಿಳಿಸಿದರು.

ವೀರಾಜಪೇಟೆ ಹಾಗೂ ಸಿದ್ದಾಪುರದಲ್ಲಿರುವ ಸಂಘದ ಶಾಖೆಗಳು ಆರ್ಥಿಕವಾಗಿ ಪ್ರಗತಿಯಲ್ಲಿವೆ. ಸರ್ಕಾರದ ಆದೇಶದಂತೆ ಸಂಘದಲ್ಲಿ ಈಗಾಗಲೇ ಯಶಸ್ವಿನಿ ಯೋಜನೆಯನ್ನು ಆರಂಭಿಸಲಾಗಿದೆ. ಮರಣ ನಿಧಿ ಕೂಡ ಚಾಲ್ತಿಯಲ್ಲಿದ್ದು, ಸದಸ್ಯರು ಇದರ ಲಾಭ ಪಡೆದುಕೊಳ್ಳಬೇಕೆಂದು ಗಣೇಶ್ ಮನವಿ ಮಾಡಿದರು. 

ಸಭೆಯಲ್ಲಿ ನಿರ್ದೇಶಕರುಗಳಾದ ಎಸ್.ಐ. ಮುನೀರ್ ಅಹಮ್ಮದ್, ಎಂ.ಪಿ. ಕಾವೇರಪ್ಪ, ಎಂ.ಇ. ಅಬ್ದುಲ್ ರಹೀಂ, ಎಂ. ಬಿಜೋಯ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News