ಎಲ್ಲರ ಒಗ್ಗಟ್ಟಿನಿಂದ ಮಡಿಕೇರಿ ದಸರಾವನ್ನು ಅರ್ಥಗರ್ಭಿತಗೊಳಿಸಬೇಕು: ಸುನೀಲ್ ಸುಬ್ರಮಣಿ

Update: 2017-09-21 17:47 GMT

ಮಡಿಕೇರಿ, ಸೆ.21: ಪ್ರತೀ ವರ್ಷ ವಿಜೃಂಭಣೆಯಿಂದ ನಡೆಯುತ್ತಿರುವ ಮಡಿಕೇರಿ ದಸರಾದಲ್ಲಿ ದಶ ಮಂಟಪಗಳ ಬಹುಮಾನ ಘೋಷಣೆಯ ಸಂದರ್ಭ ಅಪಸ್ವರಗಳು ಕೇಳಿ ಬರುತ್ತಿದ್ದು, ಕೇವಲ ಬಹುಮಾನಕ್ಕಾಗಿ ದಸರಾ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನೀಲ್ ಸುಬ್ರಮಣಿ ಸಲಹೆ ನೀಡಿದ್ದಾರೆ. 

ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಬಳಿ ನಿರ್ಮಿಸಲಾಗಿರುವ ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದಶಮಂಟಪಗಳ ಬಹುಮಾನ ಘೋಷಣೆಯ ಸಂದರ್ಭ ಅಸಮಾಧಾನದ ವಾತಾವರಣ ಸೃಷ್ಟಿಯಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ ರೀತಿಯ ಬೆಳವಣಿಗೆಗೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಿನಿಂದ ದೇವರ ಕಾರ್ಯ ಮಾಡುವ ಮೂಲಕ ಮಡಿಕೇರಿ ದಸರಾವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಕಿವಿಮಾತು ಹೇಳಿದರು.

ಕರಗಗಳಿಗೆ ರೂ.2 ಲಕ್ಷ: ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸರಕಾರದ ಅನುದಾನದ ಮೂಲಕ ತಲಾ ಎರಡು ಲಕ್ಷ ರೂ. ನೀಡಲಾಗುವುದು ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡಗಿನ ಎಲ್ಲಾ ಜನರು 9 ದಿನಗಳ ಕಾಲ ದಸರಾ ಉತ್ಸವವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಸರಾ ಅನುದಾನದ ಬಗ್ಗೆ ಪ್ರತೀ ವರ್ಷ ಗೊಂದಲ ಸೃಷ್ಟಿಯಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಎರಡು ತಿಂಗಳು ಮುಂಚಿತವಾಗಿ ಸರಕಾರದ ಬಳಿ ಅನುದಾನ ಕೋರುವುದು ಸೂಕ್ತವೆಂದು ಸಲಹೆ ನೀಡಿದರು.

ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಗರಸಭಾ ಅಧ್ಯಕ್ಷ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ. ಎಸ್.ಪ್ರಕಾಶ್, ನಗರಸಭಾ ಪೌರಯುಕ್ತೆ ಶುಭಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ಪ್ರಕಾಶ್ ಆಚಾರ್ಯ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಉದ್ಯಮಿ ಪ್ರಸನ್ನ ಭಟ್, ದಸರಾ ಮಂಟಪ ಸಮಿತಿಯ ಅಧ್ಯಕ್ಷ ಸತೀಶ್ ಧರ್ಮಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News