ಪಾಕಿಸ್ತಾನವು `ಟೆರರಿಸ್ತಾನ' ಆಗಿದೆ : ವಿಶ್ವ ಸಂಸ್ಥೆಗೆ ಹೇಳಿದ ಭಾರತ

Update: 2017-09-22 05:45 GMT

ವಾಷಿಂಗ್ಟನ್,ಸೆ.22 :  ಪಾಕಿಸ್ತಾನವು `ಟೆರರಿಸ್ತಾನ'ವಾಗಿ ಬಿಟ್ಟಿದೆ ಎಂದು ಭಾರತ ಗುರುವಾರ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹೇಳುವ ಮೂಲಕ ಕಾಶ್ಮೀರದಲ್ಲಿ ಯುದ್ಧಾಪರಾಧಗಳನ್ನು ಭಾರತ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಮಾಡಿರುವ ಆರೋಪಕ್ಕೆ ತಕ್ಕ ತಿರುಗೇಟು ನೀಡಿದೆ.
``ತನ್ನ ಸಣ್ಣ ಇತಿಹಾಸದಲ್ಲಿ ಪಾಕಿಸ್ತಾನ ಈಗಲೇ ಉಗ್ರವಾದಕ್ಕೆ ಇನ್ನೊಂದು ಹೆಸರಾಗಿ ಬಿಟ್ಟಿದೆ.  ಶುದ್ಧ ನಾಡಿನ ಅನ್ವೇಷಣೆಯಲ್ಲಿ (ಉರ್ದು ಭಾಷೆಯಲ್ಲಿ ಪಾಕ್ ಎಂದರೆ ಶುದ್ಧ) ವಾಸ್ತವವಾಗಿ ಶುದ್ಧ ಉಗ್ರ  ನಾಡೊಂದನ್ನು ಉತ್ಪಾದಿಸಿದೆ. ಪಾಕಿಸ್ತಾನ ಈಗ ಟೆರರಿಸ್ತಾನ್,'' ಎಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರನ್ನುದ್ದೇಶಿಸಿ ಭಾರತ ನೀಡಿದ ಹೇಳಿಕೆ ತಿಳಿಸಿದೆ.

ಪಾಕ್ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರು  ಮಾಡಿದ ಆಕ್ರಮಣಕಾರಿ ಭಾಷಣಕ್ಕೆ ಪ್ರತಿಯಾಗಿ ಭಾರತ ನೀಡಿದ ಈ ಉತ್ತರ ಎರಡೂ ರಾಷ್ಟ್ರಗಳ ನಡುವಿನ ವಾಕ್ಸಮರವನ್ನು ಇನ್ನಷ್ಟು ತೀಕ್ಷ್ಣವಾಗಿಸಿದೆ.

``ಭಾರತವು ಕಾಶ್ಮೀರದಲ್ಲಿ ಮಾಡಿರುವ ಅಪರಾಧಗಳಿಗೆ ಪಾಕಿಸ್ತಾನವು ಅಂತಾರಾಷ್ಟ್ರೀಯ ತನಿಖೆಯನ್ನು ಆಗ್ರಹಿಸುತ್ತದೆ,'' ಎಂದು ಹೇಳಿದ್ದ ಅಬ್ಬಾಸಿ ಈ ಆರೋಪದ ತನಿಖೆಗೆ ತನಿಖಾ ಆಯೋಗವೊಂದನ್ನು ಕಾಶ್ಮೀರಕ್ಕೆ ಕಳುಹಿಸಿ ಅಲ್ಲಿ ಭಾರತ ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳನ್ನು ಅರಿತು  ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿ ನೊಂದವರಿಗೆ ನ್ಯಾಯ ಒದಗಿಸಬೇಕು'' ಎಂಬ ಬೇಡಿಕೆಯಿರಿಸಿದ್ದರು.
ಇದಕ್ಕೆ ಪ್ರತಿಯಾಗಿ ಭಾರತ ತನ್ನ ಹೇಳಿಕೆಯಲ್ಲಿ ``ಒಸಾಮಾ ಬಿನ್ ಲಾಡೆನ್ ಹಾಗೂ ಮುಲ್ಲಾ ಓಮರ್ ನಂತಹವರಿಗೆ ರಕ್ಷಣೆ ನೀಡಿದ ದೇಶವೊಂದು ಇದೀಗ ಸಂತ್ರಸ್ತನಂತೆ ನಟಿಸುತ್ತಿರುವುದು  ಅಸಾಮಾನ್ಯ,'' ಎಂದು ಹೇಳಿತ್ತು.

``ಲಷ್ಕರ್-ಇ-ತೊಯ್ಬಾದಂತಹ ಉಗ್ರ ಸಂಘಟನೆಯೊಂದರ ನಾಯಕನಾದ ಹಫೀಜ್ ಮೊಹಮ್ಮದ್  ಆ ದೇಶದಲ್ಲಿ ರಾಜಕೀಯ ಪಕ್ಷವೊಂದರ ಕಾನೂನುಬದ್ಧ ನಾಯಕನಾಗಿರುವುದರಿಂದಲೇ  ಆ ದೇಶದ ಸ್ಥಿತಿಗತಿಯನ್ನು ಅಂದಾಜಿಸಬಹುದು'' ಎಂದೂ ಭಾರತ ಹೇಳಿದೆ. ಹಫೀಜ್ 2008ರ ಮುಂಬೈ ದಾಳಿ ಪ್ರಕರಣದ ರೂವಾರಿಯೆಂಬುದನ್ನು ಇಲ್ಲಿ ಸ್ಮರಿಸಬಹುದು.

``ಜಮ್ಮು ಕಾಶ್ಮೀರ ರಾಜ್ಯ ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯುವುದೆಂದು ಪಾಕಿಸ್ತಾನ ತಿಳಿಯಬೇಕು. ಅದು ಗಡಿಯಾಚೆಗಿನ ಎಷ್ಟೇ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡರೂ ಭಾರತ ಆ ಜಮ್ಮು ಕಾಶ್ಮೀರದ ಮೇಲೆ ಹೊಂದಿರುವ ಅಧಿಪತ್ಯವನ್ನು ಗೌಣವಾಗಿಸಲು ಸಾಧ್ಯವಿಲ್ಲ'' ಎಂದೂ ಭಾರತ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News