ತುಮಕೂರು: ಶಾಸಕರಿಂದ ನಗರದ ಚರಂಡಿ ಕಾಮಗಾರಿ ವೀಕ್ಷಣೆ

Update: 2017-09-22 12:37 GMT

ತುಮಕೂರು, ಸೆ.22: ನಗರದ 11ನೆ ವಾರ್ಡಿನ ರಾಜೀವ್‍ ಗಾಂಧಿ ನಗರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಯನ್ನು ನಗರ ಶಾಸಕ ಡಾ.ರಫೀಕ್ ಅಹ್ಮದ್ ವೀಕ್ಷಿಸಿದರು.

ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ಷಣ್ಮುಖಪ್ಪ, ಪಾಲಿಕೆ 11ನೆ ವಾರ್ಡಿನ ಪಾಲಿಕೆ ಸದಸ್ಯ ವೆಂಕಟೇಶ್,ಪಾಲಿಕೆ ಎಇಇ ಮರಿಯಪ್ಪ ಹಾಗೂ ಸ್ಥಳೀಯ ಮುಖಂಡರೊದಿಗೆ ಕಾಮಗಾರಿಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಶಾಸಕ ಡಾ.ರಫೀಕ್ ಅಹ್ಮದ್, ತುಮಕೂರು ನಗರದ 6  ಕೊಳಗೇರಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ, ಕುಡಿಯುವ ನೀರು ಮತ್ತಿತರ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮೊದಲ ಹಂತದಲ್ಲಿ ಮರಳೂರು ದಿಣ್ಣೆಯ ಜನತಾ ಕಾಲನಿಯಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಾಜೀವ್‍ ಗಾಂಧಿ ನಗರದಲ್ಲಿಯೂ ಸುಮಾರು 3000 ಮೀಟರ್ ಬಾಕ್ಸ್ ಚರಂಡಿ, 1000 ಮೀಟರ್ ಸಿಸಿ ರಸ್ತೆ ಕಾಮಗಾರಿಗಳನ್ನು ನಗರಪಾಲಿಕೆಯ 100 ಕೋಟಿ ರೂ.ಅನುದಾನದಲ್ಲಿ 1 ಕೋಟಿ ರೂ.ಬಳಕೆ ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ಪ್ರಸ್ತುತ ಬಾಕ್ಸ್ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಅದು ಮುಗಿದ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೊಳಗೇರಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮರಳೂರು ದಿಣ್ಣೆ ಮತ್ತು ರಾಜೀವ್‍ ಗಾಂಧಿ ನಗರಗಳಲ್ಲಿ ಚರಂಡಿ ಕಾಮಗಾರಿ ಮುಗಿಯುತ್ತಾ ಬಂದಿದ್ದು, ಖಾಸಗಿ ಲೇಔಟ್‍ಗಳನ್ನು ನಾಚಿಸುವಂತೆ ಬಡಾವಣೆಗಳು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಡವರ ಕಾಲನಿಗಳಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಗಳು ಶಾಶ್ವತವಾಗಿ ಉಳಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು  ಸ್ಥಳದಲ್ಲಿ ಹಾಜರಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ, ನಗರಪಾಲಿಕೆ ಎಇಇಗಳಿಗೆ ಶಾಸಕ ಡಾ.ರಫೀಕ್ ಅಹ್ಮದ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News