ಸಿದ್ದಾರ್ಥ್ ಕಂಪೆನಿಯಲ್ಲಿ 2ನೆ ದಿನವೂ ಮುಂದುವರಿದ ಐಟಿ ದಾಳಿ
ಚಿಕ್ಕಮಗಳೂರು, ಸೆ.22: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಸಿದ್ದಾರ್ಥ್‌ಗೆ ಸೇರಿದ ಕಂಪೆನಿಗಳ ಮೇಲೆ ಐಟಿ ದಾಳಿ ಎರಡನೆ ದಿನವಾದ ಶುಕ್ರವಾರವೂ ಮುಂದುವರೆದಿದೆ.
ಚಿಕ್ಕಮಗಳೂರು ನಗರದಲ್ಲಿರುವ ಕಾಫಿ ಡೇ ಗ್ಲೋಬಲ್ ಲಿಮಿಟೆಡ್, ಸೆರಾಯ್ ರೆಸಾರ್ಟ್, ಮೂಡಿಗೆರೆ ತಾಲೂಕಿನ ಬಂಗಲೆ ಹಾಗೂ ಎಸ್ಟೇಟ್ ಕಚೇರಿಗಳ ಮೇಲೆ ಐಟಿ ದಾಳಿ ಮುಂದುವರಿದಿದೆ. ಐಟಿ ಅಧಿಕಾರಿಗಳು ಸತತ ಎರಡು ದಿನಗಳಿಂದ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. 3 ಐಟಿ ಅಧಿಕಾರಿಗಳ ತಂಡದಿಂದ ಒಟ್ಟು 10ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಐಟಿ ಅಧಿಕಾರಿಗಳು ಗುರುವಾರ ರಾತ್ರಿ ಇಡೀ ಕಚೇರಿಗಳಲ್ಲಿರುವ ಮಹತ್ವದ ಅನೇಕ ಕಡತಗಳ ಪರಿಶೀಲನಾ ಕಾರ್ಯ ನಡೆಸಿದ್ದಾರೆ. ಇಂದು ಕೂಡ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ಹಲವು ಮಾಹಿತಿಗಳನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಅಲ್ಲದೇ ಅಧಿಕಾರಿಗಳ ಮತ್ತೊಂದು ತಂಡ ಚಿಕ್ಕಮಗಳೂರಿನ ಬಾಳೆಹೊಳೆಯತ್ತ ತೆರಳಿದೆ. ಬಾಳೆಹೊಳೆಯಲ್ಲಿ ಸಿದ್ಧಾರ್ಥ್ ಸಂಬಂಧಿಕರ ತೋಟದ ದಾಖಲೆಗಳನ್ನು ಪರಿಶೀಲನೆ ಮಾಡುವ ಹಿನ್ನೆಲೆಯಲ್ಲಿ ನಗರ ಠಾಣೆಯ ಪಿಸಿ ಜತೆಗೆ ತೆರಳಿದ್ದಾರೆ. ಅಲ್ಲದೇ ಕಂಪೆನಿಗೆ ಸೇರಿದ ಹಲವು ವಾಹನಗಳಲ್ಲದೇ, ಲಾರಿ, ಕಾರುಗಳ ತಪಾಸಣೆಯನ್ನೂ ನಡೆಸಲಾಗಿದೆ ಎಂದು ತಿಳಿದು ಬಂದಿದೆ.