ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬಳ್ಳಾರಿ, ಸೆ. 22: ರಾಜ್ಯ ಸರಕಾರ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಶಿಕ್ಷಣದ ಅಭಿವೃದ್ಧಿಗೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೆ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶ್ರೀಮಂತರ ಮಕ್ಕಳು ಲ್ಯಾಪ್‌ಟಾಪ್ ಖರೀದಿಸುತ್ತಾರೆ. ಬಡವರ ಮಕ್ಕಳಿಗೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪದವಿ ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಲ್ಲ ವರ್ಗದ 1.96ಲಕ್ಷ ವಿದ್ಯಾರ್ಥಿಗಳಿಗೆ ಈ ವರ್ಷ ಗುಣಮಟ್ಟದ ಲ್ಯಾಪ್‌ಟಾಪ್ ವಿತರಿಸಲು ನಿರ್ಧರಿಸಿದ್ದು, ನವೆಂಬರ್‌ನಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣದಿಂದ ಸಮಾನತೆ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಗನಿಗೂ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಸಮ-ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಸಿದ್ದರಾಮಯ್ಯ, ಒಂದು ಸಮಾಜ, ದೇಶ ಅಭಿವೃದ್ಧಿಯಾಗಿದೆ ಎಂದರೇ ಅಲ್ಲಿನ ಜನರು ಅಕ್ಷರ ಸಂಸ್ಕೃತಿ ಉಳ್ಳವರಾಗಿದ್ದಾರೆಂದು ಅರ್ಥ ಎಂದರು.
ಶಿಕ್ಷಣದಿಂದ ಮಾತ್ರ ಅರಿವು, ಬದುಕು ಕಟ್ಟಿಕೊಳ್ಳಲು ಸಾಧ್ಯ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸಮಾಜದಲ್ಲಿ ಹುಟ್ಟಿದ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದ ಅವರು, ಬಹುಸಂಖ್ಯಾತ ಜನರು ಅದರಲ್ಲೂ ವಿಶೇಷವಾಗಿ ಚಾತುರ್ವರ್ಣ ಪದ್ಧತಿಯಲ್ಲಿ ಕೊನೆಯ ವರ್ಗ ಮತ್ತು ಎಲ್ಲ ವರ್ಗಗಳ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಿಮುಖರಾಗಿರುವುದು ಸಾಮಾಜಿಕ, ಆರ್ಥಿಕ ಅಸಮಾನತೆ ಹಾಗೂ ಲಿಂಗ ತಾರತಮ್ಯ ಮತ್ತು ಜಾತೀಯತೆಗೆ ಕಾರಣ ಎಂದರು.
ಮಾತೃಭಾಷೆ ಕನ್ನಡವಾದರೆ ಆಡಳಿತ ಭಾಷೆ ತಮಿಳು, ಇಂತಹ ಹೊತ್ತಿನಲ್ಲಿ 1916ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪಿಸಿ ನೂರು ವರ್ಷಗಳ ಕಾಲ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಈ ಸಂಸ್ಥೆಯ ಸಾಧನೆ ಅಮೋಘ ಎಂದು ಬಣ್ಣಿಸಿದ ಸಿಎಂ, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಬಸವರಾಜ ರಾಯರೆಡ್ಡಿ, ಶರಣಪ್ರಕಾಶ ಪಾಟೀಲ್, ಸಂತೋಷ ಲಾಡ್ ಪಾಲ್ಗೊಂಡಿದ್ದು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ ಅಧ್ಯಕ್ಷತೆ ವಹಿಸಿದ್ದರು.