×
Ad

ರೈತರಿಗೆ ಕೇಂದ್ರದಿಂದ ಸಾಲಮನ್ನಾ ‘ಲಾಲಿ ಪಪ್’ ಕೊಡಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-09-22 22:40 IST

ಕೊಪ್ಪಳ, ಸೆ. 22: ರಾಜ್ಯ ಸರಕಾರದ 50 ಸಾವಿರ ರೂ.ವರೆಗಿನ ರೈತರ ಸಾಲಮನ್ನಾ ಘೋಷಣೆಯನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಲಾಲಿಪಪ್‌ಗೆ ಹೋಲಿಸಿದ್ದಾರೆ. ಅವರು ಪ್ರಧಾನಿ ಮೋದಿಗೆ ಹೇಳಿ ಅದೇ ‘ಲಾಲಿಪಪ್’ ಅನ್ನು ರೈತರಿಗೆ ಕೊಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಶುಕ್ರವಾರ ಕೊಪ್ಪಳದಲ್ಲಿ ಆಯೋಜಿಸಿದ್ದ ಸೌಲಭ್ಯ ವಿತರಣೆ, ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮಿಗಳು, ಬಂಡವಾಳಶಾಹಿ ಕಾರ್ಪೊರೇಟ್ ಕಂಪೆನಿಗಳ ಕೋಟ್ಯಂತರ ರೂ.ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಿದೆ. ಆದರೆ, ರೈತರ ಸಾಲಮನ್ನಾಕ್ಕೆ ಅವರ ಬಳಿ ಹಣವಿಲ್ಲ ಎಂದು ಟೀಕಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ರಾಜ್ಯದ ರೈತರು ಪಡೆದಿರುವ 42 ಸಾವಿರ ಕೋಟಿ ರೂ.ಗಳ ಸಾಲ ಮನ್ನಾಕ್ಕೆ ಸರ್ವಪಕ್ಷ ನಿಯೋಗದಲ್ಲಿ ತೆರಳಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ರಾಜ್ಯ ಸರಕಾರ 22ಲಕ್ಷಕ್ಕೂ ಅಧಿಕ ಮಂದಿ ರೈತರ 50 ಸಾವಿರ ರೂ.ವರೆಗೆ ಕೃಷಿ ಸಾಲ ಮನ್ನಾ ಮಾಡಲಾಗಿದೆ ಎಂದು ಹೇಳಿದರು.

ವೈದ್ಯಕೀಯ ಕಾಲೇಜು: ಕೊಪ್ಪಳದಲ್ಲಿ 1,500 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಕೊಪ್ಪಳ ಜಿಲ್ಲಾ ಇತಿಹಾಸದಲ್ಲೆ ಇದೊಂದು ಐತಿಹಾಸಿಕ ಸಮಾರಂಭ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ವಿಶ್ಲೇಷಿಸಿದರು.

ಕೊಪ್ಪಳ, ಯಲಬುರ್ಗಾ ತಾಲೂಕಿನ ಕೆರೆಗಳನ್ನು ತುಂಬಿಸಲು 260 ಕೋಟಿ ರೂ. ವೆಚ್ಚದ ಯೋಜನೆಗೆ ಇಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಕೊಪ್ಪಳ ವೈದ್ಯಕೀಯ ಕಾಲೇಜು ನೀಡಿದ್ದು, ನಮ್ಮ ಸರಕಾರ ಹೊಸದಾಗಿ ರಾಜ್ಯದಲ್ಲಿ 13 ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ನಾವು ಅಧಿಕಾರಕ್ಕೆ ಬರುವ ಮುನ್ನ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ವೇಳೆ ನೀರಾವರಿ ಯೋಜನೆಗಳಿಗೆ ಪ್ರತೀ ವರ್ಷ 10 ಸಾವಿರ ಕೋಟಿ ರೂ.ವೆಚ್ವ ಮಾಡುವುದಾಗಿ ಹೇಳಿದ್ದೆ. ಐದು ವರ್ಷದಲ್ಲಿ 60 ಸಾವಿರ ಕೋಟಿ ರೂ. ಖರ್ಚು ಮಾಡಿ, ನುಡಿದಂತೆ ನಡೆಯುತ್ತೇವೆ ಎಂದು ಘೋಷಿಸಿದರು.

ಕೃಷ್ಣಾ ಬಿ ಸ್ಕೀಮ್ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಇದೇ ಆರ್ಥಿಕ ವರ್ಷದಲ್ಲಿ ಚಾಲನೆ ನೀಡುತ್ತೇವೆ. ನೀರಾವರಿ ನಮ್ಮ ಮೊದಲ ಆದ್ಯತೆ. ಶಿಕ್ಷಣ, ಆರೋಗ್ಯ, ನೀರಾವರಿ, ಇಂಧನ ಇಲಾಖೆಗೆ ಕಳೆದ ಐದು ವರ್ಷದಲ್ಲಿ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.

ಅನ್ನಭಾಗ್ಯ ಯೋಜನೆಯಿಂದ ಬರಗಾಲದಲ್ಲಿ ಗುಳೇ ಹೋಗುವವರ ಸಂಖ್ಯೆ ಕಡಿಮೆ ಆಗಿದೆ. 1.25 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಿಂದ ಅನುಕೂಲ ಆಗಿದೆ ಎಂದ ಅವರು, 1206 ಕೋಟಿ ರೂ.ಸರಕಾರ ಕ್ಷೀರಧಾರೆ ಯೋಜನೆಗೆ ವೆಚ್ಚ ಮಾಡುತ್ತಿದೆ. ಹೈನುಗಾರರಿಗೆ ಲೀಟರ್ ಹಾಲಿಗೆ 5ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. 1.5 ಕೋಟಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಬಿಸಿ ಹಾಲು ನೀಡುತ್ತಿದ್ದೇವೆ ಎಂದರು.

ಸರಕಾರಿ ಕಾಮಗಾರಿಗಳಲ್ಲಿ ಎಸ್ಸಿ-ಎಸ್ಟಿ ವರ್ಗದ ಗುತ್ತಿಗೆದಾರರಿಗೆ 50 ಲಕ್ಷ ರೂ. ವರೆಗಿನ ಕಾಮಗಾರಿ ಮೀಸಲಿಟ್ಟಿದ್ದು, ಈ ಸಂಬಂಧ ಕಾನೂನು ರೂಪಿಸಲಾಗಿದೆ ಎಂದ ಅವರು, ನಾನೂ ಹಳ್ಳಿಯವನೇ, ವ್ಯವಸಾಯ ಮಾಡಿ ಬಂದವನು, ಹೊಲದಲ್ಲಿ ಉಳುಮೆ ಮಾಡಿದ್ದೇನೆ. ಏನೂ ಮಾಡದವರು ನಾವು ಮಣ್ಣಿನ ಮಕ್ಕಳು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಸಮಾವೇಶದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸರಾಜ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕಾನೂನು ಸಚಿವ ಜಯಚಂದ್ರ, ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News