ಬಸರಾಳು ಹೋಬಳಿ ಕೆರೆಕಟ್ಟೆಗಳಿಗೆ ನೀರು ಹರಿಸಲು ಒತ್ತಾಯಿಸಿ ರಸ್ತೆತಡೆ
ಮಂಡ್ಯ, ಸೆ.22: ಬಸರಾಳು ಹೋಬಳಿಯ ಕೆರೆಕಟ್ಟೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ಬಸರಾಳು ಹೋಬಳಿ ಗ್ರಾಮಸ್ಥರು ಬಸರಾಳುವಿನಲ್ಲಿ ಶುಕ್ರವಾರ ರಸ್ತೆತಡೆ ನಡೆಸಿದರು.
ಬಸರಾಳು ಹೋಬಳಿಗೆ ಹೇಮಾವತಿ ಎಡದಂಡೆ ನಾಲೆ ಮೂಲಕ ನೀರು ಹರಿಸಲು ಕಾಲುವೆ ಇದ್ದರೂ ಕಾವೇರಿ ನೀರಾವರಿ ನಿಗಮದ ಮುಖ್ಯ ಕಾರ್ಯಪಾಲಕ ಅಭಿಯಂತರರು ನೀರು ಹರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಹೇಮಾವತಿ ನಾಲೆಗೆ ನೀರು ಹರಿಸಿದಾಗಲೆಲ್ಲಾ ನಾಗಮಂಗಲ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸುತ್ತಾರೆ. ಬಸರಾಳು ಮತ್ತು ದುದ್ದ ಹೋಬಳಿಗೆ ಕೇಳಿದರೆ, ಕಾಲಮಿತಿ ನಿಗದಿ ಮಾಡಿಲ್ಲ ಎಂದು ಸಬೂಬು ಹೇಳುತ್ತಾರೆ. ಅಂದರೆ, ನಾಗಮಂಗಲಕ್ಕೆ ಮಾತ್ರ ಪ್ರತ್ಯೇಕ ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಬಸರಾಳು ಮತ್ತು ದುದ್ದ ಹೋಬಳಿಯಿಂದ 1,920 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ನಾಗಮಂಗಲ ವ್ಯಾಪ್ತಿಯಲ್ಲಿ 1,270 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಬಸರಾಳು ಮತ್ತು ದುದ್ದ ಹೋಬಳಿಯಲ್ಲಿ 61 ಕೆರೆಗಳು ಈ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲಾ ದಾಖಲೆಗಳ ಪ್ರಕಾರ ಬಸರಾಳು ಮತ್ತು ದುದ್ದ ಹೋಬಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಪ್ರತಿಪಾದಿಸಿದರು.
ನೀರು ಬಂದಾಗಲೆಲ್ಲಾ ನಾಗಮಂಗಲ ತಾಲೂಕಿಗೇ ಹರಿಸುತ್ತಾರೆ. ಕೇಳಿದರೆ, ಇಲ್ಲದ ಸಲ್ಲದ ಸಬೂಬು ಹೇಳುತ್ತಾರೆ. ಒತ್ತಾಯ ಮಾಡಿದರೆ ಎರಡು ಅಥವಾ ಮೂರು ದಿನಗಳ ಕಾಲ ಮಾತ್ರ ನೀರು ಹರಿಸಲಾಗುತ್ತಿದೆ. ಇದನ್ನು ಬಿಟ್ಟು ಬಸರಾಳು ವ್ಯಾಪ್ತಿಯ ಎಲ್ಲ ಕೆರೆಗಳನ್ನು ತುಂಬಿಸಿ ಜನಜಾನುವಾರುಗಳಿಗೆ ನೀರಿನ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಾಗೇಶ್, ಕಾರ್ಯಪಾಲಕ ಅಭಿಯಂತರ ನಟರಾಜು, ಸೋಮವಾರದಿಂದಲೇ ಈ ಭಾಗದ ನಾಲೆಗಳಿಗೆ ನೀರು ಹರಿಸಿ, ಕೆರೆಕಟ್ಟೆಗಳನ್ನು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಸದಸ್ಯ ಚಂದಗಾಲು ಎನ್. ಶಿವಣ್ಣ, ತಾಲೂಕು ಜಾ.ದಳ ಅಧ್ಯಕ್ಷ ಎಂ.ಜಿ. ತಿಮ್ಮೇಗೌಡ, ಕೆಂಚನಹಳ್ಳಿ ಪುಟ್ಟಸ್ವಾಮಿ, ಕೃಷ್ಣೇಗೌಡ, ಕಾಳೇಗೌಡ, ಶಿವನಂಜಪ್ಪ, ಬಸವರಾಜು, ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ತಿಮ್ಮೇಗೌಡ, ಸೂಗೇಗೌಡ, ರಾಜು, ಅಪ್ಪಾಜಿ, ಗುರುಸ್ವಾಮಿ, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.