​ಇಂಧನ ಸಚಿವರಿಂದ ಪಾವಗಡ ಸೋಲಾರ್‍ಪಾರ್ಕ್ ಕಾಮಗಾರಿ ಪರಿಶೀಲನೆ

Update: 2017-09-22 18:22 GMT

ತುಮಕೂರು, ಸೆ.22: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಶುಕ್ರವಾರ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 12ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಸೋಲಾರ್ ಪಾರ್ಕ್ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 28ರಂದು ಪಾವಗಡಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಡನೆ ಈ ಪರಿಶೀಲನೆ ನಡೆಸಲಾಗುತ್ತಿದೆ. ಪಾರ್ಕ್ ನಿರ್ಮಾಣದಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯ, ಮತ್ತಿತರ ಕೆಲಸಗಳ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿದರು.

ಕಳೆದ 45 ವರ್ಷಗಳಿಂದ ಬರಪೀಡಿತ ತಾಲೂಕೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಪಾವಗಡ ತಾಲೂಕಿನಲ್ಲಿ ನಿರ್ಮಾಣ ವಾಗುತ್ತಿರುವ ಸೋಲಾರ್ ಪಾರ್ಕ್‍ನತ್ತ ಅನ್ಯ ರಾಜ್ಯ, ಕೇಂದ್ರವಲ್ಲದೆ ವಿದೇಶೀ ತಜ್ಞರು, ನಾಯಕರು ಚಿತ್ತ ಹರಿಸಿದ್ದಾರೆ.ರೈತರಿಗೆ ಅನ್ಯಾಯವಾಗದಂತೆ ಈ ಒಣಭೂಮಿಯಲ್ಲಿ ಅವರ ಜಮೀನು ಸ್ವಾಧೀನ ಪಡಿಸಿಕೊಳ್ಳದೆ ಕಾಮಗಾರಿ ಕೈಗೊಳ್ಳಲು ಹೇಗೆ ಸಾಧ್ಯವೆಂದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ರೈತರನ್ನು ಉಳಿಸಿ ನಿರ್ಮಾಣ ಮಾಡುತ್ತಿರುವ ಸೋಲಾರ್ ಪಾರ್ಕ್ ಯೋಜನೆಯ ಮಾದರಿಯನ್ನು ವೀಕ್ಷಿಸಲು ಕೇಂದ್ರ ಹಾಗೂ ರಾಜ್ಯದ ಸಂಸದರು, ಶಾಸಕರು, ವಿವಿಧ ಜನಪ್ರತಿನಿಧಿಗಳು, ಬ್ಯಾಂಕುಗಳು  ಭೇಟಿ ನೀಡುವ ಆಶಯ ತೋರಿದ್ದಾರೆ ಎಂದರು.

600 ಮೆ.ವ್ಯಾ. ವಿದ್ಯುತ್ ಹರಿಸಲು ಸಿದ್ಧ: ಪಾವಗಡದಲ್ಲಿ 2 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆಗಾಗಿ ಕೈಗೊಂಡಿರುವ ಈ ಸೋಲಾರ್ ಪಾರ್ಕ್‍ನಿಂದ ಪ್ರಾರಂಭಿಕ ಹಂತವಾಗಿ 600 ಮೆಗಾ ವ್ಯಾಟ್ ವಿದ್ಯತ್ ಹರಿಸಲು ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ನಿಗದಿಯಾದ ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಂಡು ಜನಾನುಕೂಲಕ್ಕೆ ಅವಕಾಶ ಮಾಡಿಕೊಡುವುದು ಸರಕಾರದ ಉದ್ದೇಶ. ಈ ಸೋಲಾರ್ ಪಾರ್ಕ್‍ಗಾಗಿ ನಿಗದಿಪಡಿಸಿರುವ 12ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚ ಇನ್ನೂ ಹೆಚ್ಚಾಗಬಹುದು. ವಿದ್ಯುತ್ ಕಾಮಗಾರಿ ಹೊರತುಪಡಿಸಿ ಮೂಲಭೂತ ಸೌಕರ್ಯ,ಉದ್ಯೋಗ, ಉದ್ಯೋಗೇತರ ಉದ್ದೇಶಗಳಿಗಾಗಿ ಆಗುವ ವೆಚ್ಚವನ್ನು ಪ್ರತ್ಯೇಕವಾಗಿ ಅಂದಾಜಿಸಲಾಗುವುದು ಎಂದು ಹೇಳಿದರು.

ಪಿಜಿಸಿಎಲ್‍ಗೆ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ: ಪಿಜಿಸಿಎಲ್ ಸಂಸ್ಥೆಯು 16ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪಾವಗಡ ಸೋಲಾರ್ ಪಾರ್ಕ್‍ನಿಂದ ಜಿಲ್ಲೆಯ ಮಧುಗಿರಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಬೆಂಗಳೂರಿನ ದೇವನಹಳ್ಳಿಗೆ ವಿದ್ಯುತ್ ಮಾರ್ಗ ಕಲ್ಪಿಸುವ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಿದೆ.ಪ್ರತಿ ಯೂನಿಟ್ ವಿದ್ಯುತ್‍ಗೆ ದರ  ನಿಗಧಿಗೊಳಿಸಲು ಟೆಂಡರು ಕರೆಯಲಾಗಿದ್ದು,ವಿದೇಶೀಯರು ಸಹ ಈ ಯೋಜನೆಗೆ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಚಂದ್ರಪ್ಪ, ಶಾಸಕ ತಿಮ್ಮರಾಯಪ್ಪ, ಮಾಜಿ ಶಾಸಕ ವೆಂಕಟರಮಣಪ್ಪ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್,ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಮಧುಗಿರಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ, ಕರ್ನಾಟಕ ಸೋಲಾರ್ ಪವರ್ ಡೆವೆಲಪ್‍ಮೆಂಟ್ ಕಾರ್ಪೋರೇಷನ್ ಅಧ್ಯಕ್ಷ ಜಿ.ಎಸ್.ಬಲರಾಮ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News