ಜಿಎಸ್‍ಟಿಯಿಂದ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಲಿದೆ: ಶಿವಸುಂದರ್

Update: 2017-09-22 18:27 GMT

ತುಮಕೂರು, ಸೆ.22: ಜಿಎಸ್‍ಟಿ ಒಂದು ಪರೋಕ್ಷ ತೆರಿಗೆ ಪದ್ಧತಿಯಾಗಿದ್ದು, ಇಂತಹ ಪರೋಕ್ಷ ತೆರಿಗೆ ಪದ್ಧತಿ ಯಾವಾಗಲೂ ಬಡವರ ಜೇಬಿಗೆ ಕೈಹಾಕಿ ಎಲ್ಲಾ ಉಳಿತಾಯವನ್ನೂ ಸಂಪೂರ್ಣ ಹೀರುವ ವ್ಯವಸ್ಥೆಯಾಗಿದೆ. ಜಿಎಸ್‍ಟಿ ಹೊಡೆತಕ್ಕೆ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಲಿದೆ ಚಿಂತಕ,ಅಂಕಣಕಾರ ಶಿವಸುಂದರ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಮತ್ತು ಕರ್ನಾಟಕ ಜನಶಕ್ತಿ ಸಹಯೋಗದಲ್ಲಿ ಇದೇ ಗುರುವಾರ ನಗರದ ನಿವೃತ್ತ ನೌಕರರ ಮಹಾಮನೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಎಸ್‍ಟಿ ಸಾಧಕ ಬಾಧಕಗಳ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸರಕು ಮತ್ತು ಸೇವಾ ತೆರಿಗೆಯನ್ನು ಮೊದಲು ಆರಂಭಿಸಿದ್ದು ವಾಜಪೇಯಿ ಸರಕಾರ ನಂತರ ಅದನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದ್ದು ಯುಪಿಎ ಸರಕಾರ ಆಗ ಮೋದಿಯೇ ವಿರೋಧಿಸಿದ್ದರು. ಆದರೆ ಈಗ ಯಾರಿಗೆ ಅನುಕೂಲ ಮಾಡಿಕೊಡಲು ಈ ತರಿಗೆ ಪದ್ದತಿ ಜಾರಿಗೊಳಿಸಿದ್ದಾರೆ ಎಂಬುದನ್ನು ಚಿಂತಿಸಬೇಕಿದೆ ಎಂದರು.

ಜಿಎಸ್‍ಟಿಯಿಂದ ರಾಜ್ಯಗಳ ಸಾರ್ವಭೌಮತೆಗೆ ಭಾರಿ ಹೊಡೆತ ಬೀಳಲಿದೆ.ಈ ಜಿಎಸ್‍ಟಿ ಕುರಿತು ನಿಜವಾದ ಅಂಕಿಅಂಶಗಳೊಂದಿಗೆ ಚರ್ಚಿಸದ ಸರಕಾರ ಕೇವಲ ಇದು ಕ್ರಾಂತಿಕಾರಕ ಹೆಜ್ಜೆ ಎಂದು ಘೋಷಣೆಗಳಲ್ಲಿ ಹೊಟ್ಟೆ ತುಂಬಿಸುತ್ತಿದೆ.ಈಗಾಗಲೇ ನಿಧಾನವಾಗಿ ಜನರಿಗೆ ಇದರ ವಾಸ್ತವಾಂಶ ಅರ್ಥವಾಗುತ್ತಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹಾ.ರಮಾಕುಮಾರಿ ಮಾತನಾಡಿ, ಯಾವಗಲೂ ಸಾಹಿತ್ಯ ಹೊಸವಿಚಾರಗಳಿಗೆ, ಹೊಸ ಬದಲಾವಣೆಗೂ ತರೆದುಕೊಂಡಿರಬೇಕು.ಇಲ್ಲವಾದರೆ ವಾಸ್ತವ ಬದುಕನ್ನು ಗ್ರಹಿಸಲು, ಬರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಹುಚರ್ಚೆಗೆ ಒಳಗಾಗುತ್ತಿರುವ ಜಿಎಸ್ ಟಿ ಕುರಿತು ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜನಶಕ್ತಿಯ ಅಧ್ಯಕ್ಷೀಯ ಮಂಡಳೀಯ ಸದಸ್ಯರದ ರಾಮಕೃಷ್ಣಪ್ಪ, ಸಿಗ್ನಾ ಯುವ ಸಂವಾದ ಕೇಂದ್ರದ ಜ್ಞಾನಸಿಂಧು ಸ್ವಾಮಿ, ಹೋರಾಟಗಾರ ದೊರೈರಾಜು, ಪರಿಸರವಾದಿ ಯತಿರಾಜ್, ಜನ ಶಕ್ತಿಯ ಜಿಲ್ಲಾ ಸಂಚಾಲಕ ಅನಿಲ್ ಕುಮಾರ್ ಚಿಕ್ಕದಾಳವಾಟ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News