×
Ad

ಸಿದ್ಧಾರ್ಥ ಅಕ್ರಮ ಆಸ್ತಿಗೆ ತೆಲಗಿ ಹಗರಣವೇ ಮೂಲ: ಎಸ್.ಆರ್.ಹಿರೇಮಠ್

Update: 2017-09-23 18:38 IST

ಬೆಂಗಳೂರು, ಸೆ. 23: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಳಿಯ ವಿ.ಜಿ. ಸಿದ್ಧಾರ್ಥ್ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಸ್ವಾಗತಾರ್ಹ, ಅವರ ಅಕ್ರಮಗಳಿಗೆ ಸಹಕರಿಸಿದವರ ಮೇಲೂ ತನಿಖೆಯಾಗಲಿ ಎಂದು ಸಮಾಜ ಪರಿವರ್ತನಾ ವೇದಿಕೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧಾರ್ಥ್ ಅವರು ಅಪಾರ ಆಸ್ತಿ, ಅವ್ಯವಹಾರಗಳ ಮೂಲಕ ಗಳಿಸಿದ ಹಣದ ಬಗ್ಗೆ ಸಮಾಜ ಪರಿವರ್ತನಾ ವೇದಿಕೆ ವತಿಯಿಂದ 2015ರ ಆ.28 ಮತ್ತು ಫೆ.2, 2017 ರಂದು ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ವಿಶೇಷ ತನಿಖೆ ತಂಡಕ್ಕೆ ಪತ್ರ ಬರೆದು ವಿವರಿಸಲಾಗಿತ್ತು. ಅವರ ಮೇಲೆ ಸಿಬಿಐ, ಸಿವಿಸಿ ಹಾಗೂ ಇತರೆ ಸಂಸ್ಥೆಗಳ ಮೂಲಕ ಕ್ರಮ ಜರುಗಿಸುವಂತೆ ಪತ್ರದ ಮೂಲಕ ಮನವಿ ಮಾಡಲಾಗಿತ್ತು ಎಂದು ಹೇಳಿದರು.

ಅಲ್ಲದೆ, ಸಿದ್ಧಾರ್ಥ್‌ರ ಅಕ್ರಮ ಆಸ್ತಿ ಸಂಪಾದನೆಗೆ ನಿವೃತ್ತ ಅಪರ ಕಾರ್ಯದರ್ಶಿ ಕೆ.ಜಯರಾಜ್, ನಿತಿನ್ ಬಾಗಮನೆ, ರಾಜಾ ಬಾಗಮನೆ, ನಾಗವೇಣಿ, ಪೂರ್ಣಿಮಾ ಜಯರಾಜ್ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸಹಾಯ ಮಾಡಿದ್ದಾರೆ. ಹೀಗಾಗಿ, ಈ ಎಲ್ಲರ ಮೇಲೂ ತನಿಖೆ ನಡೆಯಬೇಕು. ಸಿದ್ಧಾರ್ಥ್ ಅಕ್ರಮ ಆಸ್ತಿಗೆ ಕರೀಂ ಲಾಲ್ ತೆಲಗಿ ಮೂಲಕ ನಡೆಸಿರುವ ಛಾಪಾಕಾಗದ ಹಗರಣವೇ ಮೂಲವಾಗಿರುತ್ತದೆ. ಇದರ ಬಗ್ಗೆ ಸಹ ಕಟ್ಟುನಿಟ್ಟಿನ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

 ಸಿದ್ಧಾರ್ಥ್‌ರ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದರಿಂದ ದಂಡ ಕಟ್ಟಿ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ, ವಂಚನೆ ಹಾಗೂ ಅಕ್ರಮವಾಗಿ ಗಳಿಸಿರುವ ಅಪಾರ ಪ್ರಮಾಣದ ಆಸ್ತಿ ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜೊತೆಗೆ, ಅವರ ಮೇಲೆ ಜಾರಿ ನಿರ್ದೇಶನಾಲಯದ(ಇಡಿ) ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜನಸಂಗ್ರಾಮ್ ಪರಿಷತ್‌ನ ಕಾರ್ಯಾಧ್ಯಕ್ಷ ಸಿ.ಎನ್.ದೀಪಕ್ ಉಪಸ್ಥಿತರಿದ್ದರು.

ಕಪ್ಪತ್ತಗುಡ್ಡಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಾಜ್ಯ ಸರಕಾರ ನೀಡಿದ್ದ ‘ಸಂರಕ್ಷಣಾ ಮೀಸಲು ಅರಣ್ಯ’ ಎಂಬ ಅಧಿಸೂಚನೆಯನ್ನು ಪ್ರಶ್ನಿಸಿ ಬಲ್ಡೋಟಾ ಕಂಪೆನಿಯವರ ರಾಮಗಢ ಮಿನರಲ್ಸ್ ಮತ್ತು ಮೈನಿಂಗ್ ಲಿಮಿಟೆಡ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿರುವುದು ಸ್ವಾಗತಾರ್ಹ ಕ್ರಮ.

-ಎಸ್.ಆರ್.ಹೀರೆಮಠ್, ಜನ ಸಂಗ್ರಾಮ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News