ಐಟಿ ಬಲೆಯಲ್ಲಿ ಸಿಲುಕಿದ ಎಸ್.ಎಂ. ಕೃಷ್ಣ ಅಳಿಯ
ಚಿಕ್ಕಮಗಳೂರು, ಸೆ.23: ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಅವರ ಅಮೂಲ್ಗಾಮೇಟೆಡ್ ಬಿನ್ ಕಾಫಿ ಕ್ಯೂರಿಂಗ್ (ಎಬಿಸಿ) ಮೇಲಿನ ಐಟಿ ಅಧಿಕಾರಿಗಳ ದಾಳಿ ಮೂರನೇ ದಿನವಾದ ಶನಿವಾರವೂ ಮುಂದುವರಿದಿದ್ದು, ಹಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೂರುಗಳನ್ನು ಆಧರಿಸಿ ಸೆ.21ರಂದು ಬೆಳಗ್ಗೆ ಏಕ ಕಾಲದಲ್ಲಿ ಸಿದ್ದಾರ್ಥ್‌ಗೆ ಸೇರಿದ ಚಿಕ್ಕಮಗಳೂರು ನಗರದಲ್ಲಿರುವ ಎಬಿಸಿ, ಗವನಹಳ್ಳಿ ಬಳಿ ಇರುವ ಸೆರಾಯ್ ರೆಸಾರ್ಟ್ ಹಾಗೂ ಮೂಡಿಗೆರೆ ತಾಲೂಕಿನ ಚೇತನ ಎಸ್ಟೇಟ್‌ಗಳಿಗೆ ಏಕ ಕಾಲದಲ್ಲಿ ದಾಳಿ ನಡೆಸಿದ್ದರು. ಸೆ.22ರಂದು ಸಿದ್ದಾರ್ಥ್ ಅವರ ಸಂಬಂಧಿಯೋರ್ವರ ಬಂಗಲೆಗೆ ತೆರಳಿ ತಪಾಷಣೆ ನಡೆಸಿದ್ದಾರೆ.
ಸದ್ಯ ಮೂರನೇ ದಿನವಾದ ಶನಿವಾರ ಎಬಿಸಿಯಲ್ಲಿ ಬೆಳಗಿನಿಂದಲೂ ಕಡತಗಳ ತಪಾಷಣೆ ಮತ್ತು ಪರಿಶೀಲನೆ ನಡೆಸಿದ್ದಾರೆ. ಇಂದಿನ ತಪಾಸಣೆಯಲ್ಲಿ ಸುಮಾರು 15 ಮಂದಿ ಅಧಿಕಾರಿಗಳು ತೊಡಗಿದ್ದರು. ಹಲವು ದಾಖಲೆಗಳನ್ನು ಐಟಿ ತಂಡ ವಶಕ್ಕೆ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಐಟಿ ಅಧಿಕಾರಿಗಳು ಕಚೇರಿಯೊಳಗೆ ಬೀಡು ಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ತಪಾಸಣೆಯ ಸಮಯದಲ್ಲಿ ಕಚೇರಿಯಿಂದ ಹೊರಗೆ ಬರುತ್ತಿಲ್ಲ. ಹೊರಗಿನವರನ್ನು ಒಳಗೂ ಬಿಡುತ್ತಿಲ್ಲ. ಮೂರು ತಂಡಗಳಾಗಿ ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಸಿದ್ದಾರ್ಥ್ ಅವರ ಒಡೆತನದ ಎಬಿಸಿ ಕಂಪೆನಿಯಿಂದ ವಿದೇಶಗಳಿಗೆ ವಾರ್ಷಿಕ ಲಕ್ಷಾಂತರ ಟನ್ ಕಾಫಿ ರಫ್ತಾಗುತ್ತದೆ. ಅಲ್ಲದೇ ಇಲ್ಲಿ ವಾರ್ಷಿಕ ಕೋಟಿಗಟ್ಟಲೆ ರೂ.ಗಳ ವ್ಯವಹಾರಗಳು ನಡೆಯುತ್ತದೆ ಎಂದು ನಂಬಲಾಗಿದೆ. ಕೊಡು-ಕೊಳ್ಳುವ ವ್ಯವಹಾರಗಳು ಹೆಚ್ಚಾಗಿ ಇಲ್ಲಿಯೇ ನಡೆಯುತ್ತದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸೆ.24ರಂದು ತಪಾಸಣೆ ಕೊನೆಗೊಳ್ಳುವ ಸಾದ್ಯತೆ ಇದೆ ಎಂದು ಹೇಳಲಾಗಿದೆ.