ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ 10 ವರ್ಷ ಜೈಲು ಸಜೆ
Update: 2017-09-23 21:35 IST
ಮೈಸೂರು, ಸೆ.23: ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಅಪರಾಧಿ ತಂದೆಗೆ ಜಿಲ್ಲಾ 6ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಸಜೆ ವಿಧಿಸಿ ಆದೇಶ ಹೊರಡಿಸಿದೆ.
ನಗರದ ಗೋಕುಲಂ 4ನೆ ಹಂತ ಮಂಜುನಾಥ ಪುರದ ಅಪರಾಧಿ ಶಿವಶಂಕರ್ ಎಂಬಾತ 2016ರ ಅ.24ರಂದು ತನ್ನ 7 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಪೋಕ್ಸೊ ಮತ್ತು ಜೆಜೆ ಆಕ್ಟ್ ಅಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಲಕ್ಷ್ಮೀದೇವಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಶಿವಶಂಕರನಿಗೆ ನ್ಯಾಯಾಲಯ 10 ವರ್ಷಗಳ ಸಾದಾ ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿದೆ.