×
Ad

ಶಿವಮೊಗ್ಗ: ರೊಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Update: 2017-09-23 23:06 IST

ಶಿವಮೊಗ್ಗ, ಸೆ. 23: ಮ್ಯಾನ್ಮಾರ್ ದೇಶದಲ್ಲಿ ರೊಹಿಂಗ್ಯಾ ಮುಸ್ಲಿಮ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಮಧ್ಯಪ್ರವೇಶಿಸಿ ಮ್ಯಾನ್ಮಾರ್ ದೇಶದೊಂದಿಗೆ ಮಾತುಕತೆ ನಡೆಸಬೇಕು ಎಂದು ಮುಸ್ಲಿಮ್ ಹಾಸ್ಟೆಲ್ (ವಕ್ಫ್) ಸಂಘಟನೆ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಯು ಶನಿವಾರ ನಗರದ ಮುಸ್ಲಿಂ ಹಾಸ್ಟೆಲ್ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೌನ ಪ್ರತಿಭಟನೆ ನಡೆಸಿತು. ನಂತರ ಜಿಲ್ಲಾಡಳಿತದ ಮೂಲಕ ಕೇಂದ್ರ ಸಕಾರಕ್ಕೆ ಮನವಿ ಪತ್ರ ಅರ್ಪಿಸಿತು.

ರೊಹಿಂಗ್ಯಾ ಮುಸ್ಲಿಂರ ಮೇಲೆ ಮ್ಯಾನ್ಮಾರ್ ದೇಶದ ಸೈನಿಕರು ದೌರ್ಜನ್ಯ ನಡೆಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ಯುವಕರ ಹತ್ಯೆ ನಡೆಸುತ್ತಿದ್ದಾರೆ. ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ರೊಹಿಂಗ್ಯಾ ಮುಸ್ಲಿಂ ಸಮುದಾಯಕ್ಕೆ ಆ ದೇಶದಲ್ಲಿ ಇಲ್ಲಿಯವರೆಗೂ ಶಾಶ್ವತ ನಾಗರಿಕತೆ ನೀಡಿಲ್ಲ. ಇದು ಆ ದೇಶದ ಜನ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ದೌರ್ಜನ್ಯದಿಂದ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಆ ದೇಶವನ್ನು ತೊರೆಯುತ್ತಿದ್ದಾರೆ. ವಸತಿಗಾಗಿ ಪರದಾಡು ವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿ ಸಬೇಕು. ಜನಾಂಗೀಯ ನಿಂದನೆಯನ್ನು ನಿಲ್ಲಿಸದಿದ್ದಲ್ಲಿ ಆ ದೇಶದೊಂದಿಗಿನ ಎಲ್ಲಾ ಸಂಬಂಧಗಳನ್ನು ಭಾರತ ಕಡಿದುಕೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆಯ ಸಂಬಂಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು. ದೌರ್ಜನ್ಯ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಆಂಗ್ ಸಾನ್ ಸೂ ಕೀ ತಮ್ಮ ಶಾಂತಿ ಪುರಸ್ಕಾರವನ್ನು ಹಿಂದಕ್ಕೆ ನೀಡಬೇಕು. ಭಾರತವು ಮಾನವೀಯ ವೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮ್ಯಾನ್ಮಾರ್‌ನೊಂದಿಗೆ ಚರ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಮುಜೀಬ್, ಮುಹಮ್ಮದ್ ಶರೀಫ್, ಉಪಾಧ್ಯಕ್ಷ ಮುಹಮ್ಮದ್ ಗೌಸ್, ಕಾರ್ಯದರ್ಶಿ ಮುಹಮ್ಮದ್ ಸಲೀಂ, ಶಮೂನ್ ಶರೀಫ್, ಮುಹಮ್ಮದ್ ಸಾದತ್‌ವುಲ್ಲಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News