×
Ad

ಭೌತಿಕ ಬದುಕಿಗೆ ಧರ್ಮದ ಅರಿವು ಮುಖ್ಯ: ಡಾ.ವೀರಸೋಮೇಶ್ವರ ಶಿವಾಚಾರ್ಯ

Update: 2017-09-23 23:21 IST

ಕಡೂರು, ಸೆ.23: ಭೌತಿಕ ಬದುಕಿಗೆ ಧರ್ಮದ ಅರಿವು ಮುಖ್ಯ. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವುಗಳು ಗಟ್ಟಿಗೊಳ್ಳಬೇಕಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು  ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಬಾಳೆಹೊನ್ನೂರು ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 2ನೆ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಶುದ್ಧವಾದ ಬುದ್ಧಿ ಸಂಪತ್ತಿನ ಆಗರ. ತನಗಾಗಿ ಬಯಸುವುದು ಜೀವ ಗುಣ. ಮನುಷ್ಯ ಧರ್ಮದಿಂದ ವಿಮುಖನಾದರೆ ಜೀವನ ಅಶಾಂತಿಯ ಕಡಲಾಗುತ್ತದೆಂದರು.

 ಜಗತ್ತಿಗೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುವಂತೆ ದೇಶ ಕಾಯುವ ಸೈನಿಕ, ಸತ್ಯ ಶುದ್ಧ ಸಾಹಿತಿ ಮತ್ತು ದೇಶಕ್ಕೆ ಅನ್ನ ಕೊಡುವ ರೈತ ಸದಾ ಶ್ರಮಿಸುತ್ತಲೇ ಇರುತ್ತಾರೆ ಎಂದು ನುಡಿದರು.

ಶಿವಮೊಗ್ಗದ ಕಸ್ತೂರಬಾ ಕಾಲೇಜಿನ ಉಪನ್ಯಾಸಕ ಜಿ. ಎಸ್. ನಟೇಶ್ “ಅಸಿ-ಮಸಿ-ಕೃಷಿ” ವಿಷಯವಾಗಿ ಸುದೀರ್ಘವಾದ ಉಪನ್ಯಾಸ ನೀಡಿದರು.  ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳ ನೇತೃತ್ವ ವಹಿಸಿದ್ದರು. ಬಾಳೆಹೊನ್ನೂರು ಖಾಸಾ ಶಾಖಾ ಮಠದ ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮುನ್ನುಡಿ ನುಡಿದರು. 

ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ವಿ.ಸೋಮಣ್ಣ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ, ಎಂಎಲ್‍ಸಿ ಡಾ. ಮೋಟಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕಡೂರು ಸಿ.ನಂಜಪ್ಪ, ತಾಪಂ ಅಧ್ಯಕ್ಷೆ ರೇಣುಕಾ ಡಿ.ಎಸ್.ಉಮೇಶ್, ಕಾಂಗ್ರೆಸ್ ಧುರೀಣರಾದ ಕೆ.ಎಂ.ವಿನಾಯಕ್, ಕೆ.ಎಸ್.ಆನಂದ್ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News