×
Ad

ಮೋದಿ ಮತ್ತೆ ಚಹಾ ಮಾರಬೇಕಾಗಿ ಬರಬಹುದು: ಸಂಸದ ರಾಜುಶೆಟ್ಟಿ

Update: 2017-09-23 23:55 IST

ತುಮಕೂರು, ಸೆ.23:ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ರೈತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದೇ ಮೋಸ ಮಾಡಿದರೆ, ಚಹಾ ಮಾರುತ್ತಿದ್ದ ಮೋದಿ ಮತ್ತೆ ಚಹಾ ಮಾರಬೇಕಾಗುತ್ತದೆ ಎಂದು ಮಹಾರಾಷ್ಟ್ರದ ಸಂಸದ ರಾಜುಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಟೌನ್‍ಹಾಲ್‍ನಲ್ಲಿ ನಡೆದ ರೈತ ಸಮಾವೇಶ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ ರೈತರಿಗೆ ಅವರನ್ನು ಕೆಳಗಿಳಿಸುವ ತಾಕತ್ತು ಇದೆ ಎನ್ನುವುದನ್ನು ಮರೆಯಬಾರದು.ಸರಕಾರಗಳು,ರಾಜಕೀಯ ಪಕ್ಷಗಳೊಂದಿಗೆ ರೈತರು ನಡೆಸುತ್ತಿರುವ ಕುರುಕ್ಷೇತ್ರದ ಅಂತಿಮ ಹೋರಾಟ ದೆಹಲಿಯಲ್ಲಿ ನಡೆಯಲಿದೆ,ರೈತರ ಸಾಲವನ್ನು ಮನ್ನಾ ಮಾಡದೇ ಮೋದಿ, ಕಾರ್ಪೋರೇಟ್ ಸಂಸ್ಥೆ, ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ರೈತರು ಒಂದಾಗಿ ಸರಕಾರದ ವಿರುದ್ಧ ಹೋರಾಡಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಿದೆ. ಉದ್ಯಮಿಗಳ ಸಾಲಮನ್ನಾ ಮಾಡಿದ ಮೋದಿಗೆ ರೈತರ ಸಾಲವನ್ನು ಮನ್ನಾ ಮಾಡಲು ಹಣವಿಲ್ಲದಿದ್ದರೆ, ರೈತರೆಲ್ಲರೂ ಒಂದೊಂದು ರೂಪಾಯಿ ಭಿಕ್ಷೆಯನ್ನು ಪಡೆದು ಮೋದಿಗೆ ನೀಡೋಣ, ರೈತರ ಒಗ್ಗಟ್ಟನ್ನು ಮುರಿಯಲು ರಾಜಕೀಯಪಕ್ಷಗಳು ಪ್ರಯತ್ನಿಸುತ್ತಿವೆ ಆದರೆ ನಾವು ನಮ್ಮ ಒಗ್ಗಟ್ಟಿನಿಂದಲೇ ನಮ್ಮ ಹಕ್ಕನ್ನು ಕಸಿದುಕೊಳ್ಳೋಣ ಎಂದು ಹೇಳಿದರು.

ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಮಾತನಾಡಿ , ಚುನಾವಣೆಗೂ ಮುಂಚೆ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಈಡೇರಿಸುವಂತೇ ಒತ್ತಾಯಿಸಿ ನವೆಂಬರ್ 20 ರಂದು ದೆಹಲಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಭಾರತಕ್ಕೆ ರೈತ ಹೋರಾಟದ ಸಿದ್ಧಾಂತವನ್ನು ನೀಡಿದ್ದು ಕರ್ನಾಟಕ, ಕರ್ನಾಟಕದ ರೈತರು ಹೋರಾಟದಲ್ಲಿ ಪಾಲ್ಗೊಂಡರೆ ಹೋರಾಟಕ್ಕೆ ಶಕ್ತಿ ಸೇರ್ಪಡೆಯಾಗುತ್ತದೆ. ರೈತರು ಕೊಡುತ್ತಾರೆ ಹೊರತು ತೆಗೆದುಕೊಳ್ಳುವುದಿಲ್ಲ, ರೈತರನ್ನು ಸಾಲದಿಂದ ಋಣಮುಕ್ತಗೊಳಿಸಬೇಕು, ರೈತರಿಂದ ಏನು ಮಾಡಲು ಆಗುವುದಿಲ್ಲ ಎನ್ನುವ ಭಾವನೆ ಸರ್ಕಾರ ನಡೆಸುವವವರಲ್ಲಿದೆ ಆದರಿಂದ ಭಾರತದ ರೈತರೆಲ್ಲರೂ ಹೋರಾಡಬೇಕಾಗಿದೆ ಎಂದರು.

ಸಮಾವೇಶದಲ್ಲಿ ಮಾತನಾಡಿದ ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ ಸಂಚಾಲಕ ವಿಎಂಸಿಂಗ್, ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದರು. ಅದನ್ನು ತಡೆಯುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ,ಯುಪಿಎ ಸರಕಾರದ ಅವಧಿಯಲ್ಲಿ ರಚಿಸಿದ್ದ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸುವಲ್ಲಿ ಯಾವುದೇ ಪಕ್ಷಗಳಿಗೂ ಆಸಕ್ತಿ ಇಲ್ಲ. ಅಧಿಕಾರಕ್ಕೆ ಬಂದರೆ ರೈತರ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದ ಮೋದಿ ತಮ್ಮ ಮಾತನ್ನು ಮರೆತು ಆಡಳಿತ ನಡೆಸುತ್ತಿದ್ದಾರೆ ಎಂದರು.

ರಾಜ್ಯ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಬರಗಾಲದಲ್ಲಿಯೂ ಕಷ್ಟಪಟ್ಟು ತೊಗರಿ ಬೆಳೆದಿರುವ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಮೋದಿ ಅವರು ಅದಾನಿ ಸಂಸ್ಥೆಯವರಿಗೆ ತೊಗರಿಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ನಮ್ಮ ರೈತರಿಗೆ ನಷ್ಟವಾದರು ಪರವಾಗಿಲ್ಲ, ಅದಾನಿಯವರಿಗೆ ಲಾಭ ಮಾಡಿಕೊಡುವ ಮೋದಿಯವರಿಂದ ರೈತ ಸಮುದಾಯ ಬೇರೆ ಏನು ನಿರೀಕ್ಷಿಸಬಹುದು ಎಂದು ಲೇವಡಿ ಮಾಡಿದರು.

ಸಮಾವೇಶದಲ್ಲಿ ಡಾ.ವಿಜುಕೃಷ್ಣನ್, ಕಿರಣ್ ವಿಶ್ರ, ಚಂದ್ರಶೇಖರ್, ಕವಿತಾ ಕೋಲ್ಗುಂಟೆ, ಆನಂದ್‍ಪಟೇಲ್, ಧನಂಜಯ ಆರಾಧ್ಯ, ಸತೀಶ್ ಕೆಂಕರೆ, ಶಂಕರಣ್ಣ ತಿಮ್ಲಾಪುರ, ಪರಮಶಿವಯ್ಯ ಸೇರಿದಂತೆ ನೂರಾರು ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News