ಕಲಬುರಗಿ: ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಬೃಹತ್ ಸಮಾವೇಶ
ಕಲಬುರಗಿ, ಸೆ.24: ಹೈದರಾಬಾದ್ ಕರ್ನಾಟಕ ಭಾಗದ ಬಿಸಿಲ ನಾಡು ಕಲಬುರಗಿ ಜಿಲ್ಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಆಗ್ರಹಿಸಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ನೂರಾರು ಮಠಾಧೀಶರ ನೇತೃತ್ವದಲ್ಲಿ ರವಿವಾರ ಎನ್‌ವಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.
ಸ್ವತಂತ್ರ ಧರ್ಮಕ್ಕಾಗಿ ಆಗ್ರಹಿಸಿ ಕಳೆದ ಎರಡು ತಿಂಗಳಲ್ಲಿ ಲಿಂಗಾಯತ ಸಮುದಾಯ ನಡೆಯುತ್ತಿರುವ ನಾಲ್ಕನೆ ಬೃಹತ್ ಸಮಾವೇಶ ಇದಾಗಿದ್ದು, ಈ ಹಿಂದೆ ಬೀದರ್, ಬೆಳಗಾವಿ ಹಾಗೂ ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು.
ಹೈದರಾಬಾದ್ ಕರ್ನಾಟಕ ವಿಭಾಗ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾವಿರಾರು ವಾಹನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಬಸವ ಅನುಯಾಯಿಗಳ ಜನ ಪ್ರವಾಹವೇ ಸೇರಿತ್ತು.
ಗಂಜ್ ಪ್ರದೇಶದ ಲಾಹೋಟಿ ಕಲ್ಯಾಣ ಮಂಟಪದಿಂದ ಆರಂಭವಾದ ಈ ರ್ಯಾಲಿ ನಗರದ ಸೂಪರ್ ಮಾರ್ಕೆಟ್ ಮತ್ತು ಜಗತ್ ವೃತ್ತದ ಮಾರ್ಗವಾಗಿ ನೂತನ ವಿದ್ಯಾಲಯ(ಎನ್‌ವಿ)ಮೈದಾನಕ್ಕೆ ತಲುಪಿತು. ಈ ಸಮಾವೇಶಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಆದರೂ, ಜಿಲ್ಲೆಯಲ್ಲಿ ಕಣ್ಣು ಹಾಯಿಸದಲ್ಲೆಲ್ಲ ರ್ಯಾಲಿಯ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿತ್ತು.
ಸಾಂವಿಧಾನಿಕವಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಒದಗಿಸಿ ಕೊಡುವಂತೆ ಸಮಾವೇಶದಲ್ಲಿ ಸೇರಿದ್ದ ಜನಸಾಗರವು ಒಕ್ಕೋರಲ ಆಗ್ರಹವನ್ನು ಕೇಂದ್ರ ಸರಕಾರದ ಮುಂದಿಟ್ಟಿತು.
ಈ ವೇಳೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬಸವಣ್ಣನ ಜನ್ಮಭೂಮಿಯಿಂದ ನಾನು ಬಂದವನು. ಇದೊಂದು ಐತಿಹಾಸಿಕ ಸಮಾವೇಶ. ಈ ಸಮಾವೇಶಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ, ಅವುಗಳ ನಡುವೆ ಜಾಗೃತರಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಲಿಂಗಾಯತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನವೆಂಬರ್ 5, ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನವೆಂಬರ್ 19, ಬೆಂಗಳೂರಿನಲ್ಲಿ ಡಿಸೆಂಬರ್ 10ರಂದು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗುವುದು. ಇದರಲ್ಲಿ ಸುಮಾರು 20 ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ನವ ಭಾರತ ನಿರ್ಮಾಣ ಮಾಡಬೇಕೆಂಬ ಸಂಕಲ್ಪ ನಾವು ಹೊಂದಿದ್ದೇವೆ. ನಮ್ಮ ಸಂಸ್ಕೃತಿ ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪ. ರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ವಿಚಾರಧಾರೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಲು ರಾಷ್ಟ್ರೀಯ ಬಸವ ಸೇನೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸಚಿವ ವಿನಯ್ ಕುಲಕರ್ಣಿಯನ್ನು ಇದರ ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸುಮಾರು 25 ಲಕ್ಷ ಸದಸ್ಯರನ್ನು ಈ ಸಂಘಟನೆಗೆ ಸೇರಿಸಿಕೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ವಿಶೇಷ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆಯೋಜಿಸಲಾಗುವುದು. ಎಲ್ಲ ವಿರಕ್ತ ಮಠಗಳು ಈ ಸಂಘಟನೆಯ ಕಚೇರಿಗಳಾಗಲಿವೆ ಎಂದರು.
ಲಿಂಗಾಯತ ಧರ್ಮದಲ್ಲಿನ ಅನೇಕ ಉಪ ಜಾತಿ, ಪಂಗಡಗಳಂತೆ ವೀರಶೈವವು ಒಂದು. ಅವರು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದರೆ ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ. ಆದರೆ, ವೀರಶೈವ-ಲಿಂಗಾಯತ ಧರ್ಮಕ್ಕಾಗಿ ಅವರು ಆಗ್ರಹಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಸವಣ್ಣನ ಅಂಕಿತನಾಮ ಬದಲಿಸಿದ್ದ ಬಸವ ದೀಪ್ತಿ ಪುಸ್ತಕವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಮರು ಮುದ್ರಣ ಮಾಡಬಾರದು ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿಗೆ ಇದೇ ಸಂದರ್ಭದಲ್ಲಿ ಎಂ.ಬಿ.ಪಾಟೀಲ್ ಸಲ್ಲಿಸಿದ ಮನವಿಗೆ ಅವರು ಸಹಮತ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, 12ನೆ ಶತಮಾನದಿಂದಲೂ ನಾವು ಸ್ವತಂತ್ರ ಧರ್ಮವನ್ನು ಹೊಂದಿದ್ದೇವೆ. ಈಗ ನಾವು ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಆಗ್ರಹಿಸುತ್ತಿದ್ದೇವೆ ಅಷ್ಟೇ. ನಮ್ಮ ಬೇಡಿಕೆ ಈಡೇರುವವರೆಗೆ ಸುಮ್ಮನೆ ಕೂರುವುದಿಲ್ಲ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮ್ದಾರ್ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ. ನಾವು ಯಾವುದೇ ಧರ್ಮ ಅಥವಾ ಧಾರ್ಮಿಕ ಮುಖಂಡರನ್ನು ವಿರೋಧಿಸುತ್ತಿಲ್ಲ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಮಾತ್ರ ಆಗ್ರಹಿಸುತ್ತಿದ್ದೇವೆ ಎಂದ ಅವರು, ವೀರಶೈವ ಹಾಗೂ ಲಿಂಗಾಯತ ಎರಡು ಪ್ರತ್ಯೇಕವಾದದ್ದು. ವೇದ, ಉಪನಿಷತ್ತು, ಆಗಮಗಳು ಹಾಗೂ ಇತರ ಪುರಾಣಗಳನ್ನು ವೀರಶೈವರು ಅನುಸರಿಸುತ್ತಾರೆ. ಆದರೆ, 12ನೆ ಶತಮಾನದಲ್ಲಿ ಬಸವಣ್ಣ ಹಾಗೂ ಇತರ ಸಮಾಜ ಸುಧಾಕರು ರಚಿಸಿದ ವಚನ ಸಾಹಿತ್ಯವು ಲಿಂಗಾಯತ ಧರ್ಮಕ್ಕೆ ಆಧಾರವಾಗಿದೆ. ನಮ್ಮದು ಸ್ವತಂತ್ರ ಧರ್ಮ, ವಚನ ಸಾಹಿತ್ಯವೆ ನಮಗೆ ಧಾರ್ಮಿಕ ಮಾರ್ಗದರ್ಶಕ ಎಂದು ಹೇಳಿದರು.
ಸಮಾವೇಶದಲ್ಲಿ ಬಸವಧರ್ಮ ಪೀಠದ ಮಾತೆ ಮಹಾದೇವಿ, ಶರಣಬಸಪ್ಪ, ತೋಂಟದಾರ್ಯ ಮಠದ ಸಿದ್ದಲಿಂಗಸ್ವಾಮಿ, ಶಿವಮೂರ್ತಿ ಮುರುಘಾ ಶರಣರು, ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿ, ಭಾಲ್ಕಿಯ ಪಟ್ಟದೇವರು, ಮುಂಡರಗಿಯ ನಿಜಗುಣಾನಂದ ಸ್ವಾಮಿ, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಸ್ವಾಮಿ, ಇಳಕಲ್ ಮಹಾಂತಪ್ಪ, ಸಚಿವರಾದ ಬಸವರಾಜ ರಾಯರಡ್ಡಿ, ವಿನಯ್ ಕುಲಕರ್ಣಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಮಾವೇಶದ ಚಿತ್ರ: ಅರುಣ್ ಕುಲಕರ್ಣಿ