×
Ad

ತುಮಕೂರು-ರಾಯದುರ್ಗಾ ರೈಲ್ವೆ ಕಾಮಗಾರಿ ಪೂರ್ಣಗೊಳಿಸಲು ಸಂಸದ ಮುದ್ದಹನುಮೇಗೌಡ ಸೂಚನೆ

Update: 2017-09-24 22:19 IST

ತುಮಕೂರು, ಸೆ.23: ತುಮಕೂರು-ರಾಯದುರ್ಗಾ ರೈಲ್ವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಭೂಸ್ವಾಧೀನಪಡಿಸಿಕೊಂಡು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸೂಚಿಸಿದ್ದಾರೆ. 

ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತಿದ ಅವರು, ರೈಲ್ವೆ ಕಾಮಗಾರಿ ಪೂರ್ಣಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆ ತೊಡಕಾಗಿದ್ದು, ಭೂ ಸ್ವಾಧೀನಾಧಿಕಾರಿಗಳು ಇಲ್ಲದಿರುವುದರಿಂದ ತೊಡಕಾಗುತ್ತಿದೆ ಎಂದು ತಮ್ಮ ಅಸಮಾದಾನ ಹೊರಹಾಕಿದ ಸಂಸದರು, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಕೂಡಲೇ ಭೂ ಸ್ವಾಧೀನಾಧಿಕಾರಿಗಳ ನೇಮಕಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು. 

ಜಿಲ್ಲೆಯ ಜನತೆಗೆ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯಲು ಎಲ್ಲಾ ಕ್ರಮ ಕೈಗೊಂಡಿದ್ದು, ಪ್ರಧಾನ ಅಂಚೆ ಕಚೇರಿಯಲ್ಲಿ ಇದಕ್ಕಾಗಿ ಗುರುತಿಸಿರುವ ಸ್ಥಳವನ್ನು ಕೂಡಲೇ ತೆರವು ಮಾಡಿಕೊಡುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ನಗರದಲ್ಲಿ ಮನೆ ಮನೆಗೆ ಎಲ್.ಪಿ.ಜಿ.ಗ್ಯಾಸ್ ಸಂಪರ್ಕ ಕಲ್ಪಿಸಲು ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ರೂ. 5 ಸಾವಿರ ಠೇವಣಿ ಪಡೆದು ಗ್ಯಾಸ್ ಸಂಪರ್ಕ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದರು. 

ಗ್ರಾಮ ಪಂಚಾಯತ್‍ಗಳ ಮೂಲಕ ಅನುಷ್ಠಾನಗೊಳ್ಳುತ್ತಿರುವ ಎಲ್ಲಾ ಯೋಜನೆಗಳನ್ನು ಆನ್‍ಲೈನ್ ಮೂಲಕವೇ ಮಾಡುತ್ತಿರುವುದರಿಂದ ಗ್ರಾಮ ಪಂಚಾಯತ್‍ಗಳನ್ನು ಅಂತರಜಾಲ ವಲಯಕ್ಕೆ ಸಂಪರ್ಕಿಸಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು. 

ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕಾಗಿ ಕಳೆದ ಸಾಲಿನಲ್ಲಿ ರೂ.37ಕೋಟಿಗಳಿಂದ ಸಂಪೂರ್ಣ ಅನುದಾನ ವೆಚ್ಚ ಮಾಡಲು ಆಗಲಿಲ್ಲ.ಹೀಗಾಗಿ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನದಲ್ಲಿ 14ನೇ ಸ್ಥಾನಕ್ಕೆ ತಲುಪಿತ್ತು.ಸಾಕಷ್ಟು ಸಿಬ್ಬಂದಿಗಳು ಇರುವುದರಿಂದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ವಿ.ರಂಗಸ್ವಾಮಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್,ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News