ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಲು ಎನ್ನೆಸ್ಸೆಸ್ ಸಹಕಾರಿ: ಪ್ರೊ.ಲಕ್ಷ್ಮೀಕಾಂತ್
ಚಿಕ್ಕಮಗಳೂರು, ಸೆ.24:ವಿದ್ಯಾರ್ಥಿಗಳು ಸಮಾಜಮುಖಿಗಳಾಗಿ ಬೆಳೆಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ ಎಂದು ಐಡಿಎಸ್‍ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಹೇಳಿದ್ದಾರೆ.
ರವಿವಾರ ನಗರದ ಐಡಿಎಸ್‍ಜಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಎನ್ನೆಸ್ಸೆಸ್ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಅವರಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಯುತ್ತದೆ ಎಂದು ತಿಳಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೋಕ್ಷ ಮಾತನಾಡಿ, ದೇಶದಲ್ಲಿರುವ ಜ್ವಲಂತ ಸಮಸ್ಯೆಗಳು ಮತ್ತು ಸಾಮಾಜಿಕ ಪಿಡುಗುಗಳ ನಿವಾರಣೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಪ್ರಯುಕ್ತ ಎನ್ನಡಸ್ಸೆಸ್ ವಿದ್ಯಾರ್ಥಿಗಳು ಸಾಮೂಹಿಕ ಶ್ರಮದಾನದ ಮೂಲಕ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಪ್ರೊ. ಎ.ಸಿ.ಪುಟ್ಟಸ್ವಾಮಿ, ಪ್ರೊ. ಕೆ.ಎನ್.ಪ್ರಶಾಂತ್‍ಕುಮಾರ್ ಉಪಸ್ಥಿತರಿದ್ದರು.