ಮನ್ ಕಿ ಬಾತ್ ನಲ್ಲಿ ಕಾಶ್ಮೀರದ ಯುವಕನಿಗೆ ಮೋದಿ ಶಹಬಾಸ್ ಗಿರಿ

Update: 2017-09-25 09:16 GMT

ಶ್ರೀನಗರ, ಸೆ.25: ಅವನತಿಯ ಅಂಚಿನಲ್ಲಿದ್ದ ವುಲಾರ್ ಕೆರೆಯಲ್ಲಿರುವ ಕಲ್ಮಶಗಳನ್ನು ತೆಗೆದು ಅದನ್ನು ಪುನರುಜ್ಜೀವಗೊಳಿಸಲು ಶ್ರಮಿಸುತ್ತಿರುವ  ಹಾಗೂ ಶ್ರೀನಗರ ಮುನಿಸಿಪಲ್ ಕಾರ್ಪೊರೇಶನ್ ನ ಸ್ಚಚ್ಛತಾ ರಾಯಭಾರಿಯಾಗಿರುವ 18 ವರ್ಷದ ಬಿಲಾಲ್ ಧರ್ ನನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕಿ ಬಾತ್'ನಲ್ಲಿ ಉಲ್ಲೇಖಿಸಿದ್ದಾರೆ.  ಉತ್ತರ ಕಾಶ್ಮೀರದ ಬಂಡಿಪೊರದವನಾದ ಬಿಲಾಲ್ ತನ್ನ ಕುಟುಂಬಕ್ಕೆ ನಿಯಮಿತ ಆದಾಯ ಮೂಲವಿಲ್ಲದೇ ಇರುವುದರಿಂದ ತನಗೊಂದು ಉದ್ಯೋಗ ದೊರಕಿಸಿ ಕೊಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾನೆ.

ಪ್ರಧಾನಿ ತಮ್ಮ ಮನ್ ಕಿ ಬಾತ್ ನ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿಲಾಲ್ ಧರ್ ಗೆ ತಮ್ಮ ಶುಭಾಶಯ ತಿಳಿಸುತ್ತಾ ಆತ ವುಲಾರ್ ಕೆರೆಯಿಂದ ವರ್ಷವೊಂದರಲ್ಲಿ 12,000 ಕೆಜಿ ತ್ಯಾಜ್ಯ ಹೊರತೆಗೆದಿದ್ದಾನೆ ಎಂದಿದ್ದರು.

ಯಾರು ಈ ಬಿಲಾಲ್ ದರ್ ?
 

ಬಿಲಾಲ್ ಧರ್ ಚಿಂದಿ ಆಯುವವನಾಗಿದ್ದು, ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಹರಿಯವು ವುಲಾರ್ ಕೆರೆಯಲ್ಲಿ ತುಂಬಿರುವ ಕಲ್ಮಶವನ್ನು ಒಂಟಿಯಾಗಿ ತೆಗೆಯುವ ಕಾರ್ಯಕ್ಕೆ ಕೈಹಾಕಿದ್ದ. ಕಳೆದ ಐದು ವರ್ಷಗಳಿಂದ ಆತ ಈ ಕೆರೆಯಿಂದ ತೆಗೆದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾರಿ ದಿನವೊಂದಕ್ಕೆ 150 ರಿಂದ 200ರೂ.ವರೆಗೆ ಸಂಪಾದಿಸುತ್ತಿದ್ದು, ತನ್ನ ತಾಯಿ ಹಾಗೂ ಇಬ್ಬರು ಸೋದರಿಯರನ್ನು ಸಾಕುತ್ತಿದ್ದಾನೆ. ಬಿಲಾಲ್ ನ ತಂದೆ ಮುಹಮ್ಮದ್ ರಮ್ಝಾನ್ ದರ್ ಕೂಡ ವುಲಾರ್ ಕೆರೆಯಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ  ಕೆಲಸ ಮಾಡುತ್ತಿದ್ದರು. ಅವರು 2003ರಲ್ಲಿ  ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದರು.

ಅಂದಿನಿಂದ ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ಬಿಲಾಲ್  ಮೇಲಿದೆ. ಶಿಕ್ಷಣವನ್ನು ಅರ್ಧದಲ್ಲಿಯೇ ತೊರೆದ ಆತ ಹಲವಾರು ಸಣ್ಣಪುಟ್ಟ ಕೆಲಸಗಳಿಗೆ ಕೈಹಾಕಿದರೂ ಯಾವುದರಲ್ಲೂ ಯಶಸ್ಸು ಸಾಧಿಸದೆ ಕೊನೆಗೆ ಕೆರೆಯಲ್ಲಿರುವ ಕಸಕಡ್ಡಿಗಳನ್ನು ತೆಗೆಯುವ ಕೆಲಸವನ್ನೇ ಆರಿಸಿಕೊಂಡ. ಆತನ ಈ ಕಾರ್ಯಕ್ಕೆ ಯಾರ ಸಹಕಾರವೂ ದೊರೆತಿಲ್ಲ. ಕೆರೆಯಲ್ಲಿ ಸಾಕಷ್ಟು ವಿಷಕಾರಿ ತ್ಯಾಜ್ಯಗಳು, ಮೃತದೇಹಗಳಿವೆಯೆನ್ನಲಾಗಿದ್ದು, ಹಿಂದೆ 273 ಕಿಮೀ ವಿಸ್ತೀರ್ಣವಿದ್ದ ಈ ಕೆರೆಯ ವಿಸ್ತೀರ್ಣ ಈಗ ಕೇವಲ 72 ಕಿ.ಮೀ.ಗಿಳಿದಿದೆ.

ಬಿಲಾಲ್ ನ ಕಾರ್ಯವನ್ನು ಗಮನಿಸಿ ಈ ವರ್ಷದ ಜುಲೈ ತಿಂಗಳಲ್ಲಿ ಆತನನ್ನು ಶ್ರೀನಗರ ಮುನಿಸಿಪಲ್ ಕಾರ್ಪೊರೇಶನ್ ತನ್ನ ಸ್ವಚ್ಛತಾ ರಾಯಭಾರಿಯನ್ನಾಗಿಸಿದೆ. ಆತ ಈಗ ಈ ಕೆರೆ ಸ್ವಚ್ಛತಾ ಕಾರ್ಯದ ಉಸ್ತುವಾರಿಯಾಗಿದ್ದಾನಲ್ಲದೆ ಇತರರಿಗೂ ಸ್ವಚ್ಛತೆಯ ಮಹತ್ವವನ್ನು ವಿವರಿಸುತ್ತಾನೆ. ಆತನಿಗೊಂದು ವಿಶೇಷ ಸಮವಸ್ತ್ರ ನೀಡಲಾಗಿದೆಯಲ್ಲದೆ ವಾಹನ ಕೂಡ ನೀಡಲಾಗಿದೆ. ಅದರಲ್ಲಿ  ಪ್ರಯಾಣಿಸಿ ಆತ ಜನರನ್ನು ಭೇಟಿಯಾಗಿ ಅವರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ.

ಜಲಾಲುದ್ದೀನ್ ಬಾಬಾ ಎಂಬವರು ಆತನ ಜೀವನ ವೃತ್ತಾಂತವನ್ನು ಆಧರಿಸಿ 'ಸೇವಿಂಗ್ ದಿ ಸೇವಿಯರ್ -ಸ್ಟೋರಿ ಆಫ್ ಎ ಕಿಡ್ ಆ್ಯಂಡ್ ವುಲಾರ್ ಲೇಕ್' ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News