ಭಾರೀ ಮಳೆಗೆ ದೇವನಗರಿ ತತ್ತರ

Update: 2017-09-25 14:35 GMT

ದಾವಣಗೆರೆ, ಸೆ.25: ಭಾನುವಾರ ರಾತ್ರಿ ಸತತ 8 ತಾಸುಗಿಂತ ಹೆಚ್ಚು ಕಾಲ ಸುರಿದ ಧಾರಕಾರ ಮಳೆಗೆ ದೇವನಗರಿ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡೀ ನೀರೊಳಗೆ ನಿಂತುಕೊಂಡೆ ಬೆಳಕು ಹರಿಸಿದ್ದಾರೆ ಅಲ್ಲಿನ ನಿವಾಸಿಗಳು.

ಕೆಲವರು ಮನೆ ಕಳೆದುಕೊಂಡು ಬೀದಿ ಬದಿಯಲ್ಲಿ ತಮ್ಮ ಅಳಿದುಳಿದ ವಸ್ತುಗಳನ್ನು ಗಂಟಿಕ್ಕಿಕೊಳ್ಳುತ್ತಿರುವ ದೃಶ್ಯ. ತಮ್ಮ ಕಣ್ಣ ಮುಂದೆಯೇ ಮನೆ ಕುಸಿದಿದ್ದು ನೋಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಜನ. ಶಾಲಾ ದಾಖಲಾತಿಗಳು ನೀರು ಪಾಲಾಗಿರುದನ್ನು ಹುಡುಕಿ ಆಯ್ದು ಬಿಸಿಲಲ್ಲಿ ಒಣಗಿಸುತ್ತಿದ್ದ ವಿದ್ಯಾರ್ಥಿಗಳು, ಆಧಾರ ಕಾರ್ಡ್ ಪಡಿತರ ಚೀಟಿ ಎಲ್ಲ ನೀರೊಳಗೆ ಕೊಚ್ಚಿಕೊಂಡು ಹೋದವೋ ಎಂಬ ಆತಂಕದಿಂದ ಸುತ್ತಲೂ ಕಣ್ಣಾಡಿಸುತ್ತಿದ್ದ ಜನರು, ನಮ್ಮ ಕಷ್ಟವನ್ನು ಆಲಿಸಲು ಯಾರೊಬ್ಬರು ಬಂದಿಲ್ಲವೆಂದು ರಸ್ತೆಯಲ್ಲೆ ಅಡುಗೆ ಮಾಡಿಕೊಂಡು ಪ್ರತಿಭಟಿಸಿದ ದೃಶ್ಯಗಳು ನಗರದ ಎಸ್‌ಪಿಎಸ್ ನಗರ. ಎಸ್‌ಎಂ ಕೃಷ್ಣ ನಗರ, ಆಝಾದ್ ನಗರ, ಭರತ್ ಕಾಲನಿ, ನೀಲಮ್ಮನ ತೋಟ, ಶೇಖರಪ್ಪ ನಗರ ಮುಂತಾದ ಬಡಾವಣೆಗಳಲ್ಲಿ ಕಂಡು ಬಂದಿದೆ.

ಈ ವೇಳೆ ಮಳೆಯಿಂದ ಹಾನಿಗೊಂಡ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಅವರು ಅಧಿಕಾರಗಳ ತಂಡದೊಂದಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 1 ಸಾವಿರ ಮನೆಗಳು ಸಂಪೂರ್ಣ ಅಥವಾ ಭಾಗಶಃ ಹಾನಿಗೊಳಗಾಗಿವೆ. ಜಿಲ್ಲಾಡಳಿತದಿಂದ ಸೂರು ಕಳೆದುಕೊಂಡವರಿಗೆ ಪುನವರ್ಸತಿ ಕಲ್ಪಿಸಲಾಗುತ್ತಿದೆ. ಈಗಾಗಲೇ 2 ಕಡೆ ಗಂಜಿ ಕೇಂದ್ರ ತೆರೆದಿದ್ದು, ಪರಿಸ್ಥಿತಿ ಅವಲೋಕಿಸಿ ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ಆರಂಭಿಸಲಾಗುವುದು. ಹಾಗೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ತಂಡಗಳನ್ನು ಮಾಡಿಕೊಂಡಿದ್ದು, ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಾಗೂ ಅಗತ್ಯ ಇರುವ ಎಲ್ಲಾ ನೆರವನ್ನು ಒದಗಿಸಿಕೊಡಲಾಗುತ್ತಿದೆ ಎಂದರು.

152 ಮಿಲಿ ಮೀ. ಮಳೆ: ದಾವಣಗೆರೆ ನಗರದಲ್ಲಿ 152 ಮಿಲಿ ಮೀ. ಮಳೆ ಆಗಿದೆ. ದಾವಣಗೆರೆ ಜಿಲ್ಲೆಯಾದ್ಯಂತ 70-80 ಮಿಲಿ ಮೀ. ಮಳೆಯಾಗಿದೆ. ಕೆಲವು ತಗ್ಗು ಪ್ರದೇಶದ ಮನೆಗಳಿಗೆ 3-4 ಅಡಿ ನೀರು ನಿಂತಿದ್ದು, ಹಲವರ ಮನೆಗಳಲ್ಲಿ ದವಸ ಧಾನ್ಯಗಳು ನೀರು ಪಾಲಾಗಿವೆ. ಅಂತಹವರಿಗೆ ಅಕ್ಕಿ, ಬೇಳೆ ಮುಂತಾದ ಪದಾರ್ಥಗಳನ್ನು ನೀಡಲಾಗುತ್ತಿದೆ.ಸಾರ್ವಜನಿಕರು ಸಹಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಎಸ್ ಪಿಎಸ್ ನಗರವೊಂದರಲ್ಲಿ 500 ಮನೆಗಳಿಗೆ ನೀರು ನುಗ್ಗಿದೆ. ಕಾಲುವೆಗಳ ಒತ್ತುವರಿಯಾಗುವುದರಿಂದ ನೀರು ಸರಾಗವಾಗಿ ಸಾಗದೆ ಇರುವುದು ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದು. ಈ ಅನಾಹುತಗಳಿಗೆ ಕಾರಣವಾಗಿದೆ. ಅಗ್ನಿಶಾಮಕ ಠಾಣೆ ಬಳಿ 120 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಮಳೆಯಿಂದ ಹಾನಿಯಾಗಿದ್ದು, ವರದಿ ತರಿಸಿಕೊಳ್ಳಲಾಗುತ್ತಿದೆಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೇಯರ್ ಅನಿತಾಬಾಯಿ ಮಾಲತೇಶ್, ಉಪಮೇಯರ್ ಮಂಜಮ್ಮ, ಉಪವಿಭಾಗಾಧಿಕಾರಿ ಸಿದ್ದೇಶ್, ತಹಶೀಲ್ದಾರ್ ಸಂತೋಷಕುಮಾರ್, ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ ಮತ್ತಿತರರಿದ್ದರು.

ಸಂಕಷ್ಟಗಳಿಗೆ ಸ್ಪಂದಿಸಿದ ಡಿಸಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ರಾತ್ರಿ 2.30 ರ ಸಮಯದಲ್ಲಿ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಪಾಲಿಕೆ ಆಯುಕ್ತರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News