ಪುರುಷೋತ್ತಮ ಭಾರತಿ ಸ್ವಾಮಿ ಅಕ್ರಮವಾಗಿ ಭೂಮಿ ಮಾರಾಟ: ಆರೋಪ

Update: 2017-09-25 15:07 GMT

ಬೆಂಗಳೂರು, ಸೆ. 25: ದೇವನಹಳ್ಳಿಯಲ್ಲಿರುವ ಶಿವಗಂಗಾ ಶಾರದಾ ಮಠಕ್ಕೆ ಸೇರಿದ ಭೂಮಿಯನ್ನು ಮಠದ ಪೀಠಾಧಿಪತಿ ಪುರುಷೋತ್ತಮ ಭಾರತಿ ಸ್ವಾಮಿ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬ್ರಾಹ್ಮಣ ಸಭಾ ಆರೋಪಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಭಾದ ಸದಸ್ಯ ಮಹೇಶ್, ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾಧಿಪತಿಯಾಗಿದ್ದ ಸಂದರ್ಭದಲ್ಲಿ ಮಠದ ಏಜೆಂಟ್ ಆಗಿದ್ದ ಸುಬ್ಬರಾವ್ ದೇವನಹಳ್ಳಿಯಲ್ಲಿರುವ ಸುಮಾರು 208 ಎಕರೆ ಭೂಮಿಯನ್ನು ಪರಭಾರೆ ಮಾಡುವಂತೆ ಸರಕಾರದ ಅನುಮತಿ ಕೋರಿದ್ದರು. ಆದರೆ, ಮಠದ ಜಮೀನು ಮಾರಾಟ ಮಾಡಲು ಅವಕಾಶವಿಲ್ಲ ಎಂದು ಸರಕಾರ ಆದೇಶ ನೀಡಿದೆ. ಆದರೆ, ಸುಬ್ಬರಾವ್ ಸರಕಾರದ ಆದೇಶವನ್ನು ಪಾಲಿಸದೇ ಮಠದ ಜಮೀನನ್ನು ಬೇರೆಯವರೆಗೆ ಕ್ರಯ ಮಾಡಿಸಿದ್ದರು. ಇದು ತಿಳಿದು ಅಂದಿನ ಪೀಠಾಧ್ಯಕ್ಷರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಆದರೆ, ಸಚ್ಚಿದಾನಂದ ಸ್ವಾಮೀಜಿ ಮರಣದ ನಂತರ, ಹೊಸದಾಗಿ ನೇಮಕಗೊಂಡ ಪುರುಷೋತ್ತಮ ಸ್ವಾಮಿಗಳು ಹಣದ ಆಮಿಷಕ್ಕೆ ಒಳಗಾಗಿ ನ್ಯಾಯಾಲಯದಲ್ಲಿನ ಪ್ರಕರಣ ಹಿಂಪಡೆದಿದ್ದಾರೆ ಎಂದು ದೂರಿದರು.

ಉಪ ನೋಂದಣಾಧಿಕಾರಿಗಳ ಕಚೇರಿಗೆ ಸ್ವಾಮೀಜಿ ಖುದ್ದು ಹಾಜರಾಗಿ ಹಿಂದಿನ ಮಠದ ಏಜೆಂಟ್ ಬರೆದುಕೊಟ್ಟಿದ್ದು ಸರಿಯಿದೆ ಎಂದು ಒಪ್ಪಿಗೆ ಪತ್ರವನ್ನು ನೋಂದಣಿ ಮಾಡಿಸಿದ್ದಾರೆ. ಹಾಗೂ ಎಕರೆಗೆ 1.87 ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ 10 ಕೋಟಿ ರೂ.ಗಳಿಗೆ ಮಾರಾಟ ಮಾಡಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಭಾದ ಅಧ್ಯಕ್ಷ ಕೆ.ಎಸ್.ಮೃತ್ಯುಂಜಯ, ಸುರೇಶ್, ಕೃಷ್ಣಮೂರ್ತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News