ಯಾದಗಿರಿಯಿಂದ ವಿವಿಧ ಜಿಲ್ಲೆಗೆ ವೋಲ್ವೊ ಬಸ್ ಸೇವೆ: ಸಚಿವ ರೇವಣ್ಣ

Update: 2017-09-25 16:05 GMT

ಯಾದಗಿರಿ, ಸೆ.25: ಮುಂದಿನ ದಿನಗಳಲ್ಲಿ ಯಾದಗಿರಿಯಿಂದ ವಿವಿಧ ಜಿಲ್ಲೆಗಳಿಗೆ(ಅಂತರ ಜಿಲ್ಲೆ) ಹವಾನಿಯಂತ್ರಿತ ವೋಲ್ವೋ ಬಸ್ ಸೇರಿ ಹೈಟೆಕ್ ಬಸ್‌ಗಳನ್ನು ಓಡಿಸಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ.

ಯಾದಗಿರಿ ನಗರದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದ ವೇಳೆ ಈ ವಿಷಯ ತಿಳಿಸಿದರು. ರಾಜ್ಯ ಸರಕಾರ 4 ವರ್ಷದಲ್ಲಿ ಒಟ್ಟು 300 ಹೊಸ ಮಾರ್ಗಗಳಲ್ಲಿ ಬಸ್ ಓಡಿಸುವ ಗುರಿ ಹೊಂದಿತ್ತು. ಈ ಪೈಕಿ 267 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಮಾಡಿದ್ದು, ಇನ್ನೂ 33 ಹೊಸ ಮಾರ್ಗಗಳಲ್ಲಿ ಬಸ್ ಓಡಿಸಬೇಕಿದೆ ಎಂದು ತಿಳಿಸಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 12,443 ಲಕ್ಷ ರೂ. ವೆಚ್ಚದಲ್ಲಿ 53 ಹೊಸ ಬಸ್ ನಿಲ್ದಾಣ ಹಾಗೂ 5 ಹೊಸ ಬಸ್ ಘಟಕಗಳನ್ನು ನಿರ್ಮಿಸಲಾಗಿದೆ. ಹಾಗೆಯೇ 78 ಹಳೆ ಬಸ್ ನಿಲ್ದಾಣ ಹಾಗೂ 52 ಹಳೆ ಬಸ್ ಘಟಕಗಳ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಜೆ.ಎನ್.ನರ್ಮ್ ಯೋಜನೆಯಡಿ 4 ಬಸ್ ಘಟಕಗಳ ನಿರ್ಮಾಣ ಮಾಡಿ 265 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ 4 ವರ್ಷಗಳ ಸಾಧನೆಯನ್ನು ಸಚಿವರು ಬಿಚ್ಚಿಟ್ಟರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯದ 3 ಸಂಸ್ಥೆಗಳು ನಷ್ಟದಲ್ಲಿದ್ದು, ಸಾಮಾಜಿಕ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳು, ವಿಕಲಚೇತನರು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಾಸ್ ಮುಂತಾದವುಗಳೇ ಕಾರಣವೆಂದು ಸಚಿವ ರೇವಣ್ಣ ತಿಳಿಸಿದರು.

4 ವರ್ಷಗಳಲ್ಲಿ ರಾಷ್ಟ್ರದ ಎಲ್ಲ ಪ್ರಕಾರಗಳ ಸಾರಿಗೆ ಪ್ರಶಸ್ತಿಗಳಲ್ಲಿ 206 ಪ್ರಶಸ್ತಿಗಳನ್ನು ಪಡೆದು ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಈ ಪೈಕಿ ಬಿಎಂಟಿಸಿ ನಗರ ಸಾರಿಗೆ 109 ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂದು ಅವರು ಅಂಕಿ ಅಂಶಗಳ ಸಹಿತ ವಿವರಿಸಿದರು. ಯಾದಗಿರಿಯಿಂದ ರಾಯಚೂರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News