ಧರ್ಮ,ರಾಜಕಾರಣದ ಮಧ್ಯೆ ಲಕ್ಷ್ಮಣ ರೇಖೆ ಇರಬೇಕು: ಶಂಕರ್

Update: 2017-09-25 17:02 GMT

ಕಡೂರು, ಸೆ.25: ಧರ್ಮ ಮತ್ತು ರಾಜಕಾರಣದ ಮಧ್ಯೆ ಒಂದು ಲಕ್ಷ್ಮಣರೇಖೆ ಇರಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಭಿನ್ನಾಭಿಪ್ರಾಯ ಮತ್ತು ಹೋರಾಟಗಳು ಪ್ರಪಂಚದ ಎಲ್ಲೆಡೆ ನಡೆದಿವೆ ಮತ್ತು ನಡೆಯುತ್ತಿವೆ. ಇದಕ್ಕೆ ಇರಾಕ್, ಇರಾನ್, ಅಫಘಾನಿಸ್ತಾನ ಮುಂತಾದ ರಾಷ್ಟ್ರಗಳನ್ನು ಉದಾಹರಿಸಬಹುದು. ಧರ್ಮ ಮತ್ತು ರಾಜಕಾರಣದ ನಡುವಿನ ಗೆರೆ ಮಸುಕಾಗುತ್ತಿರುವುದೆ ಇದಕ್ಕೆ ಕಾರಣ ಎಂದರು.

ಮನುಷ್ಯರೆಲ್ಲರೂ ಒಂದೇ ಸೇವಿಸುವ ಗಾಳಿ, ಆಹಾರ, ನೀರು ಎಲ್ಲವೂ ಒಂದೇ. ಆದರೂ ಕೂಡ ನಮ್ಮ ನಡುವೆ ಅನೇಕ ಗೊಂದಲಗಳು. ದ್ವೇಷ, ಅಸೂಯೆ ಇದೆ. ಇದು ಯಾಕೆ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಧರ್ಮದಿಂದಲೇ ಉತ್ತರ ಪಡೆಯಲು ಸಾಧ್ಯವೇ ಎಂಬ ಚಿಂತನೆಯೂ ನಡೆಯಬೇಕು ಎಂದು ಹೇಳಿದರು.

ಪ್ರಕೃತಿಯನ್ನು ನಿಯಂತ್ರಿಸಲು ಹೊರಟ ಮನುಷ್ಯ ಅದು ಸಾಧ್ಯವಾಗದಿದ್ದಾಗ ದೇವರು, ಧರ್ಮ, ಆಚರಣೆ, ನಂಬಿಕೆಗಳನ್ನು ಸೃಷ್ಟಿಸಿದ. ಆದರೆ ಶತ-ಶತಮಾನಗಳಿಂದ ಧರ್ಮಗಳಿಗೆ ಉಂಟಾಗುತ್ತಿರುವ ಗೊಂದಲಗಳನ್ನು ಋಷಿಮುನಿಗಳು ಪರಿಹರಿಸಿಕೊಂಡು ಧರ್ಮವನ್ನು ಜೋಪಾನ ಮಾಡಿಕೊಳ್ಳುತ್ತಾ ಬಂದಿದ್ದಾರೆಂದರು.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಐದು ನದಿಗಳು ಹುಟ್ಟಿದರೂ ಕಡೂರು ಮತ್ತು ತರೀಕೆರೆ ತಾಲೂಕುಗಳು ನಿರಂತರ ಬರಗಾಲಕ್ಕೆ ತುತ್ತಾಗುತ್ತಿವೆ. ಈ ನದಿಗಳ ನೀರನ್ನು ಸರ್ಕಾರದ ಯೋಜನೆಗಳು ಎಲ್ಲಿಗಾದರೂ ಕೊಂಡೊಯ್ಯಲಿ ಆದರೆ ಅದರ ಬಳಕೆ ಕಡೂರು ಮತ್ತು ತರೀಕೆರೆ ತಾಲೂಕಿನ ರೈತರಿಗೆ ಆಗಲಿ ಎಂಬುದಷ್ಟೇ ಇಲ್ಲಿಯ ಜನರ ಅಪೇಕ್ಷೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರು ಈ ವೇದಿಕೆಯಲ್ಲಿ ಇರುವುದರಿಂದ ತಮ್ಮದೊಂದು ಮನವಿ ಮೋಡ ಬಿತ್ತನೆ ಕಾರ್ಯವನ್ನು ಈಗಾಗಲೇ ಸರ್ಕಾರ ಹಲವೆಡೆ ನಡೆಸಿದೆ. ಅದೇ ರೀತಿ ಮೋಡ ಬಿತ್ತನೆಯನ್ನು ಬಯಲು ಭಾಗದ ಈ ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿ ಒಣಗಿರುವ ನೆಲ ಕಚ್ಚಿರುವ ತೆಂಗು, ಅಡಕೆ ಮತ್ತಿತರ ಬೆಳೆಗಳನ್ನು ಉಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News