ಪ್ರತಿಯೊಬ್ಬರಲ್ಲೂ ದೇಶ ನನ್ನದೆಂಬ ಭಾವನೆ ಮೂಡಿದಾಗ ದೇಶ ಅಭಿವೃದ್ಧಿ ಹೊಂದುತ್ತದೆ: ಎ.ಎನ್.ಮಹೇಶ್

Update: 2017-09-25 17:10 GMT

ಚಿಕ್ಕಮಗಳೂರು, ಸೆ.25: ಮಾನವೀಯ ಗುಣ, ಶಿಸ್ತು, ಸಾಹಸ ಪ್ರವೃತ್ತಿ ಸ್ಕೌಟ್ ಆಂದೋಲನ ಪ್ರೇರೇಪಿಸುತ್ತದೆ ಎಂದು ಕರ್ನಾಟಕರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ  ಜಿಲ್ಲಾ ಸ್ಕೌಟ್ಸ್ ಆಯುಕ್ತ  ಎ.ಎನ್.ಮಹೇಶ್ ನುಡಿದರು.

ಸೋಮವಾರ ಐಡಿಎಸ್‍ಜಿ ಸರ್ಕಾರಿ ಕಾಲೇಜಿನ ಪ್ರಸಕ್ತಸಾಲಿನ ರೋವರ್ಸ್ ಮತ್ತು ರೇಜರ್ಸ್ ಘಟಕದ ಚಟುವಟಿಕೆ ಹಾಗೂ ಒಂದುದಿನದ ‘ಮೂಲತರಬೇತಿ ಶಿಬಿರ’ವನ್ನು ಮಲ್ಲೇಗೌಡ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಯುವಚಳುವಳಿ ಜಾಗತಿಕವಾದ ವ್ಯಾಪ್ತಿ ಹೊಂದಿದೆ. ವಿದ್ಯಾರ್ಥಿ ಯುವಜನತೆಯಲ್ಲಿ ಸೇವಾ ಮನೋಭಾವ, ಸಾಹಸ, ಮಾನವೀಯ ಮೌಲ್ಯ, ಪರಿಸರ ಕಾಳಜಿ ವಿಶ್ವಭ್ರಾತೃತ್ವವನ್ನು ಬೆಳೆಸಲು ಶ್ರಮಿಸುತ್ತಿದೆ. ಎಲ್ಲ ಕಾಲೇಜುಗಳಲ್ಲೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.

ಗಾಳಿ, ನೀರು, ಬೆಳಕು ಎಲ್ಲರಿಗೂ ಒಂದೇ ಆಗಿರುವಾಗ ತಾರತಮ್ಯ ಸರಿಯಲ್ಲ. ಜಾತಿವ್ಯವಸ್ಥೆ ಹೋಗಬೇಕು. ಭಾವೈಕ್ಯತೆ ಮೂಡಬೇಕು. ದೇಶ ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆದಾಗ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು. 

ಅನ್ಯಾಯವನ್ನು ಪ್ರತಿಭಟಿಸುವ, ಒಳಿತನ್ನು ಬೆಂಬಲಿಸುವ ಮನೋಧರ್ಮ ನಮ್ಮದಾಗಬೇಕು. ಧೈರ್ಯ ಮತ್ತು ದಿಟ್ಟತನದಿಂದ ಮುನ್ನಡೆಯುವ ಮನೋಭಾವವನ್ನು ಸ್ಕೌಟ್ ಚಳುವಳಿ ಬೆಳೆಸುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಯತ್ನ, ಸತ್ಯಸಂಧತೆ, ನಂಬಿಕೆ ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಇರಬೇಕು.  ಹಿರಿಯರಿಗೆ ಸಾಧ್ಯವಾದಷ್ಟು ನೆರವು ನೀಡುವ ಗುಣಲಕ್ಷಣ ನಮ್ಮದಾಗಬೇಕು.  ಜಾತಿ, ಭಾಷೆ, ಧರ್ಮ, ಪ್ರಾಂತ, ದೇಶ ಎಲ್ಲವನ್ನೂ ಮೀರಿ ವಿಶ್ವಭ್ರಾತೃತ್ವವನ್ನು ಸ್ಕೌಟ್ಸ್ ಚಳುವಳಿ ಬೆಳಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಸಂಘಟನಾ ಆಯುಕ್ತ ಕಿರಣ್‍ಕುಮಾರ್, ಶಿಕ್ಷಣತಜ್ಞ ಬಿ.ಎಚ್.ನರೇಂದ್ರಪೈ, ಕಾಲೇಜು ಅಭಿವೃದ್ಧಿಸಮಿತಿ ಸದಸ್ಯ ಗಂಗಾಧರ್ ಮಾತನಾಡಿದರು.  ತಾಲ್ಲೂಕು ಘಟಕದ ನಂದಕುಮಾರ್, ನೀಲಕಂಠಚಾರ್, ಜಿಲ್ಲಾ ಗೈಡ್ಸ್ ಆಯುಕ್ತ ಭಾರತಿಶಿವರುದ್ರಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News