ತೋಶಿಬಾ ಇಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಸಿಸ್ಟಂ ಕಾರ್ಪೊರೇಶನ್ ನ ನೂತನ ಪವರ್ ಇಲೆಕ್ಟ್ರಾನಿಕ್ ಘಟಕಕ್ಕೆ ಚಾಲನೆ

Update: 2017-09-25 18:00 GMT

ತುಮಕೂರು, ಸೆ.25: ತುಮಕೂರಿನ ಸಮೀಪದ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಪಾನ್ ಮೂಲದ ತೋಶಿಬಾ ಇಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಸಿಸ್ಟಂ ಕಾರ್ಪೊರೇಶನ್ ನ ನೂತನ ಪವರ್ ಇಲೆಕ್ಟ್ರಾನಿಕ್ ಘಟಕಕ್ಕೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ ಉದ್ಘಾಟಿಸಿದರು. 

ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಮೆಕ್ ಕಂಪೆನಿಯ ಅಧ್ಯಕ್ಷ ಮಸಾಯಿಕ ಯಮವಿಕಾ, ನಮ್ಮ ಸಂಸ್ಥೆ ಭಾರತದಲ್ಲಿ ನೂತನ ಘಟಕವನ್ನು ತೆರೆಯಲು ಉತ್ಸಾಹದಿಂದ ಬಂಡವಾಳ ಹೂಡಿದ್ದು, ಭಾರತದಲ್ಲಿ ಅತೀ ದೊಡ್ಡ ಜಪಾನಿ ಸಂಸ್ಥೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದಿದೆ. ಭಾರತ ಸರಕಾರ ನಮಗೆ ಭಾರತದಲ್ಲಿ ಬಂಡವಾಳ ಹೂಡಲು ಅಗತ್ಯ ನೆರವು ನೀಡಿದ್ದು, ಇಲ್ಲಿನ ವಾತಾವರಣ ಕೈಗಾರಿಕಾ ಸ್ನೇಹಿಯಾಗಿದೆ. ಜೊತೆಗೆ ಕರ್ನಾಟಕ ಸರಕಾರದ ನೆರವು ಅಮೂಲ್ಯವಾಗಿದ್ದು, ಸರಕಾರ ಪ್ರತಿ ಹಂತದಲ್ಲಿಯೂ ಕೈಜೋಡಿಸಿದೆ ಎಂದು ತಿಳಿಸಿದರು.

ನಮ್ಮ ಸಂಸ್ಥೆ ಕೇವಲ ಆರ್ಥಿಕ ಬೆಳವಣಿಗೆಗೆ ಅಷ್ಟೇ ಅಲ್ಲದೆ ಭಾರತದಲ್ಲಿ ಔದ್ಯೋಗಿಕ ಹಾಗೂ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದೆ. ಭಾರತದಲ್ಲಿ ಉದ್ಯೋಗವಕಾಶಗಳು ಹೆಚ್ಚುವ ಮೂಲಕ ಭಾರತದ ಆರ್ಥಿಕ ಶಕ್ತಿ ಕೂಡ ದೊಡ್ಡದಾಗುವುದರಲ್ಲಿ ಅನುಮಾನವಿಲ್ಲ ಎಂದರು. 

ಟಿಮೆಕ್‍ನ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಜೋಶಿ ಮಾತನಾಡಿ, ಭಾರತದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಹಾಗಾಗಿ ಇಲ್ಲಿಗೆ ಬರಲು ವಿದೇಶಿ ಕಂಪೆನಿಗಳು ಮುಂದಾಗುತ್ತಿದ್ದು, ಇಲೆಕ್ಟ್ರಾನಿಕ್ ರಂಗದಲ್ಲಿ ಅತಿದೊಡ್ಡ ಹೆಸರು ಗಳಿಸಿರುವ ಟಿಮೆಕ್ ಕಂಪನಿ ಭಾರತದಲ್ಲಿ ಬಂಡವಾಳ ಹೂಡಿದ್ದು, ಇದೀಗ ತನ್ನ ನೂತನ ಘಟಕ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್,ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಮ್ ಸೇರಿದಂತೆ ಕಂಪೆನಿಂಯ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News