ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಜಯಂತ್ ಪಟೇಲ್ ರಾಜೀನಾಮೆ

Update: 2017-09-26 07:30 GMT

ಬೆಂಗಳೂರು, ಸೆ. 25 : ಮುಖ್ಯ ನ್ಯಾಯಾಧೀಶರ ಬಳಿಕ ರಾಜ್ಯ ಹೈಕೋರ್ಟ್ ನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದ ನ್ಯಾ. ಜಯಂತ್ ಪಟೇಲ್ ಸೋಮವಾರ ಹಠಾತ್ತನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ಟೊಬರ್ 9 ರಂದು ನಿವೃತ್ತರಾಗುವ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಎಸ್ ಕೆ ಮುಖರ್ಜಿ ಅವರ ಸ್ಥಾನಕ್ಕೆ ತನ್ನನ್ನು ನೇಮಿಸದೇ ತನ್ನನ್ನು ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಅಲಹಾಬಾದ್ ಹೈಕೋರ್ಟ್ ಗೆ ಹೋಗಿದ್ದರೆ ಅಲ್ಲಿ ಅವರು ಮೂರನೇ ಅತಿ ಹಿರಿಯ ನ್ಯಾಯಾಧೀಶರಾಗುತ್ತಿದ್ದರು. 

ಅವರ ರಾಜೀನಾಮೆ ಸ್ವೀಕೃತವಾಗಿದೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ಹೈಕೋರ್ಟ್ ಅಧಿಕೃತವಾಗಿ ಪ್ರಕಟಿಸಿಲ್ಲ. ಗುಜರಾತ್ ಹೈಕೋರ್ಟ್ ನಲ್ಲಿರುವಾಗ ಕುಖ್ಯಾತ ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಿದವರು ನ್ಯಾ. ಜಯಂತ್ ಪಟೇಲ್.  

ಈ ಹಿಂದೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಹಾಗೂ ಗುಜರಾತ್ ಹೈಕೋರ್ಟ್ ಬಾರ್ ಅಸೋಸಿಯೇಶನ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಜಯಂತ್ ಪಟೇಲ್ ರನ್ನು ನೇಮಿಸುವ ವಿಚಾರದಲ್ಲಿ ಧ್ವನಿಯೆತ್ತಿತ್ತು.

ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸಿಬಿಐ ತಂಡವು ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಗಳು ಹಾಗು ಗುಜರಾತ್ ಪೊಲೀಸರನ್ನು ಚಾರ್ಜ್ ಶೀಟ್ ನಲ್ಲಿ  ಹೆಸರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News