ಗೋ ಮಾಂಸದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ: ಸಚಿವ ಕಾಗೋಡು ತಿಮ್ಮಪ್ಪ

Update: 2017-09-25 18:23 GMT

ಶಿವಮೊಗ್ಗ, ಸೆ. 25: 'ಗೋ ಮಾಂಸ ವಿಷಯ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಗೋ ಮಾಂಸದ ಹೆಸರಿನಲ್ಲಿ ಕೆಲ ಕೋಮಿನವರ ವಿರುದ್ಧ ಜನರಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋ ಮಾಂಸದ ಬಗ್ಗೆ ಸಾಗರದ ಆನಂದಪುರದ ಸಮಾರಂಭದಲ್ಲಿ ತಾವಾಡಿದ ಮಾತುಗಳನ್ನು ಅವರು ಸಮರ್ಥನೆ ಮಾಡಿಕೊಂಡರು. ಕುರಿ, ದನದ ಮಾಂಸಗಳು ಒಂದೇ. ಎಲ್ಲಾ ಮಾಂಸಗಳು ಒಂದೇ ಎಂಬುದು ನನ್ನ ಭಾವನೆಯಾಗಿದೆ ಎಂದರು.

ಬಿಜೆಪಿಯವರು ಕೆಲ ಕೋಮುಗಳ ವಿರುದ್ಧ ಜನರನ್ನು ಎತ್ತಿಕಟ್ಟಲು ವಿಷ ಬೀಜ ಬಿತ್ತುತ್ತಿದ್ದಾರೆ. ಈ ರಾಜಕೀಯ ವಾಸನೆಯಿಂದ ಈ ಮಾತುಗಳನ್ನು ನಾನು ಹೇಳಬೇಕಾಗಿದೆ. ಇವತ್ತು ಎಷ್ಟು ಜನ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲ ಎಂದು ಪ್ರಶ್ನಿಸಿದರು.

ಸ್ಪರ್ಧೆ: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, 'ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೆನೆ. ಪಕ್ಷ ಸೂಚಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೆನೆ. ಎಲ್ಲವು ಪಕ್ಷದ ಸೂಚನೆಯಂತೆ ನಡೆಯಲಿದೆ' ಎಂದರು. 

ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರಣದಿಂದಲೇ ತಾವು ಇನ್ನೂ ಮಂತ್ರಿಯಾಗಿ ಮುಂದುವರೆದಿದ್ದೆನೆ. ಬೆನ್ನಿಗೆ ಚೂರಿ ಹಾಕುವ ಕೆಲಸಗೊತ್ತಿದ್ದರೆ ನಾನು ಈಗಾಗಲೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರವರು ಕಾಂಗ್ರೆಸ್ ಅಭಿಯಾನದ ಬಗ್ಗೆ ಮನೆ ಮನೆಗೆ ಕಳ್ಳರು ತೆರಳುತ್ತಿದ್ದಾರೆ ಎಂಬ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಸರಿಯಾಗಿ ಕೆಲಸ ಮಾಡದ ಗ್ರಾಮ ಲೆಕ್ಕಿಗರನ್ನು ಅಮಾನತ್ತುಗೊಳಿಸುವಂತೆ ಸಿರಿಗೆರೆ ಶ್ರೀಗಳ ಹೇಳಿಕೆ ಸರಿಯಾಗಿದೆ. ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದಾರೆ. ಅವರನ್ನು ಸರಿ ಮಾಡುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News