ಪಾಕ್ ಅಣ್ವಸ್ತ್ರ ನಾಶಕ್ಕೆ ಭಾರತ- ಅಮೆರಿಕ ಜಂಟಿ ದಾಳಿ ನಡೆಸಲಿ

Update: 2017-09-26 04:15 GMT

ಮುಂಬೈ, ಸೆ.26: ಭಾರತ ಹಾಗೂ ಅಮೆರಿಕ ಜಂಟಿಯಾಗಿ ಪೂರ್ವಭಾವಿ ದಾಳಿ ನಡೆಸಿ, ಪಾಕಿಸ್ತಾನದ ಎಲ್ಲ ಅಣ್ವಸ್ತ್ರ ದಾಸ್ತಾನು ನಾಶಪಡಿಸಬೇಕು ಎಂದು ಅಮೆರಿಕದ ಮಾಜಿ ಸೆನೆಟ್ ಸದಸ್ಯ ಲಾರ್ರಿ ಪ್ರೆಸ್ಲೆರ್ ಆಗ್ರಹಿಸಿದ್ದಾರೆ.

ಪಾಕಿಸ್ತಾನವನ್ನು ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ದೇಶ ಎಂದು ಪರಿಗಣಿಸಿ ಆ ದೇಶಕ್ಕೆ ನೋಟಿಸ್ ನೀಡಿರುವ ಡೊನಾಲ್ಡ್ ಟ್ರಂಪ್ ಭಾರತದ ಪಾಲಿಗೆ ಅತ್ಯುತ್ತಮ ಅಮೆರಿಕನ್ ಅಧ್ಯಕ್ಷರಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಆದರೆ ಇದನ್ನು ಕಾರ್ಯಗತಗೊಳಿಸಬೇಕಾದರೆ, ಸದಾ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದ ಪೆಂಟಗಾನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ಹೇಳಿದ್ದಾರೆ.

ಪೆಂಟಗಾನ್‌ನ ಇಂಥ ಬೆಂಬಲದಿಂದಾಗಿಯೇ, ಪಾಕಿಸ್ತಾನ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ, ಭಾರತವನ್ನು ಭಯೋತ್ಪಾದಕರ ತವರು ಎಂದು ಬಣ್ಣಿಸಿದೆ ಎಂದು ಅವರು ವಿಶ್ಲೇಷಿಸಿದರು. ಪೆಂಟಗಾನ್ ಒಂದು ಕೊಳಕು; ಇದನ್ನು ಸ್ವಚ್ಛಗೊಳಿಸಲು ಟ್ರಂಪ್ ಕಾರ್ಯಾಚರಣೆಗೆ ಇಳಿಯಬೇಕು ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು.

ಮೂರು ಬಾರಿ ಸೆನೆಟರ್ ಆಗಿ ಹಾಗೂ ಎರಡು ಬಾರಿ ಪ್ರತಿನಿಧಿ ಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ ಪ್ರೆಸ್ಲೆರ್ (75) ಅವರು 1990ರ ಪ್ರಸಿದ್ಧ ಪ್ರೆಸ್ಲೆರ್ ತಿದ್ದುಪಡಿಯ ಕರಡು ಸಿದ್ಧಪಡಿಸಿದವರು. ಈ ತಿದ್ದುಪಡಿಯ ಅನ್ವಯ ಅಮೆರಿಕದ ಎಲ್ಲ ಮಿಲಿಟರಿ ನೆರವನ್ನು ಪಾಕಿಸ್ಥಾನಕ್ಕೆ ಸ್ಥಗಿತಗೊಳಿಸಲಾಗಿತ್ತು.

30 ಎಫ್-16 ವಿಮಾನಗಳನ್ನು ಪಾಕಿಸ್ತಾನಕ್ಕೆ ಸರಬರಾಜು ಮಾಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರೆಸ್ಲೆರ್ ಭಾರತದ ಪಾಲಿನ ಹೀರೊ ಆಗಿದ್ದರು. ಇವರು ತಮ್ಮ ಇತ್ತೀಚಿನ ನೈಬರ್ಸ್‌ ಇನ್ ಆರ್ಮ್ಸ್ ಕೃತಿಯಲ್ಲಿ ಪಾಕಿಸ್ತಾನ ಅಣ್ವಸ್ತ್ರ ಅಭಿವೃದ್ಧಿಪಡಿಸಲು, ಅಮೆರಿಕದ ವಿದೇಶಾಂಗ ನೀತಿಯಿಂದಾಗಿ ಸಿಕ್ಕಿದ ಉತ್ತೇಜನದ ಬಗ್ಗೆ ವಿವರಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಲಾಬಿ ಸಂಸ್ಕೃತಿ ಬೆಳೆದಿರುವುದು ಮತ್ತು ಮಿಲಿಟರಿ- ಕೈಗಾರಿಕಾ ರಾಜ್ಯದ ಹಿಡಿತ ಸಾಧಿಸುವ ನೀತಿ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಸದಸ್ಯರಾಗಿ ಟ್ರಂಪ್ ಜತೆ ಭಿನ್ನ ಅಭಿಪ್ರಾಯ ಹೊಂದಿದ್ದರೂ, "ಮಾಧ್ಯಮಗಳು ಬಿಂಬಿಸುವಷ್ಟು ಕೆಟ್ಟದಾಗಿ ಟ್ರಂಪ್ ಆಡಳಿತ ನಡೆಸುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News