ಸೆ.28 ರಂದು ರಾಷ್ಟ್ರೀಯ ವಿಚಾರ ಸಂಕಿರಣ
ಬೆಂಗಳೂರು, ಸೆ.26: 'ಹಿಂದೂ-ವೀರಶೈವ -ಲಿಂಗಾಯತ ಧರ್ಮ' ಪರಿವರ್ತನೆಯ ಪರ್ವ ಎಂಬ ವಿಷಯ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಸೆ. 28ರಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ರಮೇಶ್ ಬಾಗಿ, ರಾಜ್ಯದಲ್ಲಿ ಎದ್ದಿರುವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಸಮಾನತೆಯ ಹರಿಕಾರ ಬಸವಣ್ಣರನ್ನೇ ಮುಖ್ಯವಾಗಿ ಇಟ್ಟುಕೊಂಡಿರುವುದರಿಂದ ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜದ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದೆ. ಲಿಂಗಾಯತ, ವೀರಶೈವ ಮತ್ತು ಹಿಂದೂ ಧರ್ಮಗಳ ಕುರಿತು ನಡೆಯುತ್ತಿರುವ ಹೊಸ ಕಾಲದ ವಾಗ್ವಾದಗಳು ಅಧ್ಯಯನಾಕಾಂಕ್ಷಿ ಮನಸ್ಸುಗಳನ್ನು ಸೆಳೆದಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣ ಸಹಕಾರಿಯಾಗಲಿದೆ ಎಂದರು.
ದೇಶದ ಪ್ರತಿಯೊಂದು ಬೆಳವಣಿಗೆಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಮಹತ್ವವಾದ ಪಾತ್ರ ನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ವಿಚಾರ ಸಂಕಿರಣವನ್ನು ಪರ ಅಥವಾ ವಿರುದ್ಧವಲ್ಲದೆ, ಅಧ್ಯಯನ ಹಾಗೂ ರಾಜಕೀಯ ಪಕ್ಷಗಳ, ಧಾರ್ಮಿಕ ಚಳವಳಿಯ ಹಸ್ತಕ್ಷೇಪ ಕುರಿತು ತಿಳಿಯುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಹೇಳಿದರು.
ವಿಚಾರ ಸಂಕಿರಣವನ್ನು ಬೆಂಗಳೂರು ವಿವಿ ಕುಲಪತಿ ಡಾ.ಎಚ್.ಎನ್.ರಮೇಶ್ ಉದ್ಘಾಟಿಸಲಿದ್ದು, ಬಸವಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್, ಉತ್ತರ ವಿವಿ ಕುಲಪತಿ ಡಾ.ಟಿ.ಡಿ.ಕೆಂಪರಾಜು ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ. ಈ ವೇಳೆ ಧರ್ಮ ಮತ್ತು ಜಾತಿ ವ್ಯವಸ್ಥೆ ಕುರಿತು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಧರ್ಮ ಮತ್ತು ರಾಜಕಾರಣ ಕುರಿತು ಪತ್ರಕರ್ತ ಪಾರ್ವತೀಶ್ ಬಿಳಿದಾಳೆ ವಿಷಯ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ವೆಂಕಟಾಚಲ, ಗೋಪಾಲ್ ಉಪಸ್ಥಿತರಿದ್ದರು.