×
Ad

ಬನಾರಸ್ ವಿವಿ ವಿದ್ಯಾರ್ಥಿನಿಯರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಪ್ರತಿಭೆಟನೆ

Update: 2017-09-26 23:17 IST

ತುಮಕೂರು, ಸೆ.26: ಲೈಂಗಿಕ ದೌರ್ಜನ್ಯದಿಂದ ತಮ್ಮನ್ನು ಕಾಪಾಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ನಡೆಸಿದ ಅಮಾನವೀಯ ಲಾಠಿ ಚಾರ್ಜನ್ನು ಖಂಡಿಸಿ, ಎಐಡಿಎಸ್‍ಒ, ಎಐಎಂಎಸ್‍ಎಸ್  ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಆವಿಷ್ಕಾರ-ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಎನ್.ಸ್ವಾಮಿ ಮಾತನಾಡಿ, ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಮೇಲೆ ನಡೆಸಿದ ಲಾಠಿ ಪ್ರಹಾರವನ್ನು ಅತ್ಯಂತ ಹೇಯ ಕೃತ್ಯ. ಇತಿಹಾಸದಲ್ಲಿ ವಿಶ್ವವಿದ್ಯಾನಿಲಯವು ಕ್ರಾಂತಿಗಳ ರೂಪುರೇಷೆಯನ್ನು ಹೆಣೆದ ಸ್ಥಳ. ಹೋರಾಟಗಳಿಗೆ ನಾಂದಿ ಹಾಕಿದ ಕೇಂದ್ರ. ಅಲ್ಲಿ ಸ್ವತಂತ್ರ ಚಿಂತನೆಯ, ಮುಕ್ತ ಚಿಂತನೆಯ ವಿದ್ಯಾರ್ಥಿಗಳಿರುತ್ತಾರೆ. ಅದು ದೇಶದ ಭವಿಷ್ಯವನ್ನು ರೂಪಿಸುವುದಕ್ಕೆ ತಮ್ಮ ಜೀವನವನ್ನು ಅರ್ಪಿಸುವ ಬಲಿದಾನದ ಕೇಂದ್ರವೂ ಹೌದು. ಅಂತಹ ಸ್ಥಳವಿಂದು ಭೌತಿಕ ಹಾಗೂ ಬೌದ್ಧಿಕ ದಮನದ, ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕುವ, ಮುಕ್ತ ಚಿಂತನೆಗೆ ತಡೆಗೋಡೆ ಒಡ್ಡುವ ಕೇಂದ್ರಗಳಾಗುತ್ತಿವೆ ಎಂದು ಆಕ್ರೋಶ ವ್ಕ್ತಪಡಿಸಿದರು.

ಎಐಡಿಎಸ್‍ಒ ಪರವಾಗಿ ಅಶ್ವಿನಿ ಮಾತನಾಡಿ, ವಿಶ್ವವಿದ್ಯಾನಿಲಯದಲ್ಲಿ ಮುಕ್ತವಾದ ವಾತಾವರಣ ಕಾಣೆಯಾಗಿದೆ. ಅಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರ ಮೇಲೆ ಲಾಠಿಯಿಂದ ಹೊಡೆದಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಪುರುಷ ಪೊಲೀಸರೇ ಲಾಠಿ ಪ್ರಹಾರ ಮಾಡಿರುವುದು ಅಮಾನವೀಯ ಹಾಗೂ ಕಾನೂನಿಗೆ ವಿರುದ್ಧವಾದದ್ದು ಎಂದು ಖಂಡಿಸಿದರು.

ಪ್ರತಿಭಟನೆಯಲ್ಲಿ ಎಐಎಂಎಸ್‍ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಸಂಘಟನಾಕಾರರಾದ ಕಾಮ್ರೇಡ್ ಎಸ್.ಜಿ.ಮಂಜುಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಹೆಣ್ಣುಮಕ್ಕಳ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಮಾತನಾಡಿದರು. ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News