×
Ad

ಉದ್ಯೋಗ ಸೃಷ್ಟಿಗಾಗಿ ಒತ್ತಾಯಿಸಿ ಸಹಿ ಸಂಗ್ರಹ ಆಂದೋಲನ

Update: 2017-09-26 23:22 IST

ತುಮಕೂರು, ಸೆ.26: ವರ್ಷಕ್ಕೆ 1 ಲಕ್ಷ ಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಹೆಚ್ಚಿಸುತಿದ್ದು, ಇದರ ವಿರುದ್ಧ ಸಹಿ ಆಂದೋಲವನ್ನು ಉದ್ಯೋಗಕ್ಕಾಗಿ-ಯುವಜನರು ಕರ್ನಾಟಕ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.

ತುಮಕೂರಿನ ಟೌನ್‍ಹಾಲ್ ವೃತ್ತದಲ್ಲಿ ನಡೆದ ಸಹಿ ಸಂಗ್ರಹ ಆಂದೋಲದನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಚಿಂತಕ ಕೆ.ದೊರೈರಾಜು, ಯುವ ಸಮುದಾಯ ಕೇವಲ ವೃತ್ತಿಪರ ಕೋರ್ಸುಗಳಲ್ಲೇ ಉದ್ಯೋಗ ಸಿಗುತ್ತದೆ ಎಂದು ಅದರ ಹಿಂದೆ ಬೀಳದೆ, ಗ್ರಾಮೀಣ ಭಾಗದಲ್ಲೂ ಮತ್ತು ನಗರಗಳಲ್ಲೂ ಸ್ವಯಂ ಉದ್ಯೋಗಗಳನ್ನು ರೂಪಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನಶೀಲರಾಗಬೇಕು. ಸರಕಾರದಲ್ಲಿ ಶೇ.30ರಷ್ಟು ಉದ್ಯೋಗಗಳು ಖಾಲಿ ಬಿದ್ದಿವೆ. ಅವನ್ನು ಸರಕಾರ ಕೂಡಲೇ ಭರ್ತಿ ಮಾಡಬೇಕು.ಅಲ್ಲದೆ, ಗುತ್ತಿಗೆ ಆಧಾರದಲ್ಲಿ ಅಥವಾ ಅಸಂಘಟಿತ ವಲಯಗಳಲ್ಲಿರುವ ಅತ್ಯಂತ ಅಭದ್ರತೆಯ ಲಕ್ಷಾಂತರ ಉದ್ಯೋಗಗಳಿಗೆ ಭದ್ರತೆ ಕಲ್ಪಿಸಿ ಖಾಯಂಗೊಳಿಸುವ ಕೆಲಸ ನಡೆಯಬೇಕೆಂದು ಒತ್ತಾಯಿಸಿದರು. 

ಕಲಾವಿದರೂ ಹೋರಾಟಗಾರರೂ ಆದ ಢಮರುಗ ಉಮೇಶ್,ರವಿಶಂಕರ್‍ರವರು, ಹೋರಾಟಗಾರ ಕುಂದೂರು ಮುರಳಿ, ಚೇತನ್ ಕೆಸ್ತೂರು, ಮಾರುತಿ ಮೊದಲಾದವರು ಸಹಿ ಮಾಡಿ ಯುವಾಂದೋಲನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಹಿ ಮಾಡುವ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ನಂತರ ನಗರದ ಬಸ್ ನಿಲ್ದಾಣ, ಮುಖ್ಯ ರಸ್ತೆಗಳು ಮತ್ತು ವೃತ್ತಗಳಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ, ಅವರಿಗೆ ಈ ಆಂದೋಲನದ ಕುರಿತು ಮಾಹಿತಿ ನೀಡಲಾಯಿತು.

ಈ ಸಹಿ ಸಂಗ್ರಹವು ರಾಜ್ಯಾದ್ಯಂತ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಇವುಗಳನ್ನು ತಲುಪಿಸಿ ಯುವಜನರ ಅಭಿಪ್ರಾಯವನ್ನು ತಿಳಿಸಲಾಗುವುದು; ಜೊತೆಗೆ ಉದ್ಯೋಗ ನೀಡದಿದ್ದರೆ ಓಟು ಇಲ್ಲ ಎಂಬ ಎಚ್ಚರಿಕೆಯನ್ನೂ ರವಾನಿಸಲಾಗುವುದು ಎಂದು ಉದ್ಯೋಗಕ್ಕಾಗಿ ಯುವಜನರು-ಕರ್ನಾಟಕದ ಕಾರ್ಯಕರ್ತರು ತಿಳಿಸಿದರು.

ಉದ್ಯೋಗಕ್ಕಾಗಿ ಯುವಜನರು-ಕರ್ನಾಟಕ’ದ ವತಿಯಿಂದ ಅನಿಲ್‍ಕುಮಾರ್ ಚಿಕ್ಕದಾಳವಟ್ಟ, ಹೇಮಂತ್ ಸಕಲೇಶಪುರ, ಕಾವ್ಯಶ್ರೀ,ಲಕ್ಷ್ಮೀನಾರಾಯಣ, ಚಂದನ್, ಚೇತನ್ ದಾಸರಹಳ್ಳಿ ಮೊದಲಾದವರು ಸ್ವಯಂ ಸೇವಕರಾಗಿ ಆಂದೋಲನದಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News