×
Ad

ಪ್ರತಿಯೊಬ್ಬರು ಭಷ್ಟಾಚಾರ ಮುಕ್ತ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು: ಶಂಕರಮೂರ್ತಿ

Update: 2017-09-26 23:45 IST

ಕಡೂರು, ಸೆ. 26: ಭಷ್ಟಾಚಾರ ಮುಕ್ತ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಿ ದುಡಿಯಬೇಕು ಎಂದು ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಕರೆ ನೀಡಿದರು.

ಅವರು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ನಡೆಯುತ್ತಿರುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ದರ್ಬಾರ್ ಮತ್ತು ಧರ್ಮ ಸಮ್ಮೇಳನದ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ಮೊತ್ತ ಮೊದಲಿಗೆ ಕೆಂಪು ಕೋಟೆಯ ಮೇಲೆ ನಿಂತು ಭಷ್ಟಾಚಾರದ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದಾರೆ. ಭಷ್ಟಾಚಾರ ನಿರ್ಮೂಲನೆ ಮಾಡಿ ಈ ದೇಶವನ್ನು ಸ್ವಚ್ಛ ಭಾರತವನ್ನಾಗಿ ಮಾಡೋಣ ಎಂದಿರುವುದನ್ನು ಸ್ಮರಿಸಿದರು.

ಯಾವುದೇ ಸರ್ಕಾರದ ಯೋಜನೆಗಳಿಗೆ ಜನರ ತೆರಿಗೆಯ ಹಣ ಮುಖ್ಯ ಬಂಡವಾಳ. ಜನರು ಕಟ್ಟುವ ರೂ. 16 ತೆರಿಗೆ ಲಕ್ಷ-ಲಕ್ಷವಾಗಿ ವಿವಿಧ ಯೋಜನೆಗಳಿಗೆ ವಿನಿಯೋಗವಾಗುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.

ಎಂಎಲ್‍ಸಿ ಡಾ. ಮೋಟಮ್ಮ ಮಾತನಾಡಿ, ಇಂದಿನ ದಿನಗಳಲ್ಲಿ ತಾಯಂದಿರಿಗೆ ಉತ್ತಮ ಅಡುಗೆ ತಯಾರಿಸಲು ಸಾಧ್ಯವಾಗುತ್ತಿಲ್ಲ. ಅವರು ಸದಾ ಟಿವಿ ಕಾರ್ಯಕ್ರಮಗಳಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಮನೆಯಲ್ಲಿನ ಮಕ್ಕಳು ಮತ್ತು ಹಿರಿಯರ ಆರೋಗ್ಯಕ್ಕೆ ಪೂರಕವಾದ ಆಹಾರ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ವಹಿಸಿದ್ದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News