ಯಾರೇ ಎದುರಾಳಿ ಆದರೂ ತೇರದಾಳ ಕ್ಷೇತ್ರ ಬದಲಾಯಿಸಲ್ಲ: ಉಮಾಶ್ರೀ
ಕಲಬುರುಗಿ, ಸೆ.27: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಲ್ಲ, ಬೇರೆ ಯಾರೆ ಬಲಿಷ್ಠ ನಾಯಕರು ಸ್ಪರ್ಧಿಸಿದರೂ ಹೆದರುವುದಿಲ್ಲ. ಓಡಿ ಹೋಗುವುದು ಕಾಂಗ್ರೆಸ್ ಅಥವಾ ಉಮಾಶ್ರೀ ಜಾಯಮಾನದಲ್ಲಿಲ್ಲ ಎಂದು ಸಚಿವೆ ಉಮಾಶ್ರೀ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಯಾರೇ ಎದುರಾಳಿ ಆದರೂ ತೇರದಾಳ ಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ. 2008ರ ಚುನಾವಣೆಯಲ್ಲಿ ಉಮಾಶ್ರೀ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೂ, ಅಲ್ಲಿಯೇ ಇದ್ದು ಗೆಲುವು ಸಾಧಿಸಿ ತೋರಿಸಿದ್ದೇನೆ. ಸೋಲು-ಗೆಲುವು ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮಲ್ಲಿದ್ದು, ಅಂಜಿಕೆ ಅಳಕು ನಮ್ಮಲ್ಲಿಲ್ಲ. ಯಾರೇ ಸ್ಪರ್ಧಿಸಿದರು ಹೆದರುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
ಮಾತೃಪೂರ್ಣ ಯೋಜನೆ: ಅ.2ರಂದು ರಾಜ್ಯದಾದ್ಯಂತ ಮಾತೃಪೂರ್ಣ ಯೋಜನೆ ಜಾರಿ ತರಲಾಗುತ್ತಿದೆ. ಯೋಜನೆಯಡಿ ಸುಮಾರು 10 ಲಕ್ಷ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲಾಗುವುದು. ಇದಕ್ಕಾಗಿ, ರಾಜ್ಯ ಸರಕಾರ 102 ಕೋಟಿ ರೂ. ಹಣ ಮೀಸಲಿಟ್ಟಿರುವುದಾಗಿ ತಿಳಿಸಿದರು.
ನಾಡಗೀತೆ ಕಡಿತ: ನ.1 ಅಥವಾ ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ನಾಡಗೀತೆ ಅವಧಿ ಕಡಿತಗೊಳ್ಳಲಿದೆ. ಈಗಾಗಲೇ, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಎರಡು ನಿಮಿಷಗಳ ಅವಧಿಯ ನಾಡಗೀತೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಉಮಾಶ್ರೀ ಇದೇ ಸಂದರ್ಭದಲ್ಲಿ ಹೇಳಿದರು.