×
Ad

ವರುಣನ ಆರ್ಭಟಕ್ಕೆ ತತ್ತರಿಸಿದ ಮೈಸೂರು

Update: 2017-09-27 22:07 IST

ಮೈಸೂರು, ಸೆ.27: ಮೈಸೂರು ನಗರದಲ್ಲಿ ಮಂಗಳವಾರ ರಾತ್ರಿ ಇಡೀ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದ್ದು, ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಸ್ಥಳಿಯರನ್ನು ಬೋಟ್‍ಗಳ ಸಹಾಯದಿಂದ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಜತೆಗೆ ಹಲವು ಪ್ರಮುಖ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಭಾರೀ ಗಾತ್ರದ ಮರಗಳು ದರೆಗುಳಿದಿದ್ದು, ಜನರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಜನ ದಸರಾ ಆಚರಣೆಯ ಸಂಭ್ರಮದಲ್ಲಿದ್ದು, ಮಂಗಳವಾರ ಸುರಿದ ಮಳೆಗೆ ತತ್ತರಿಸಿದ್ದಾರೆ. ಕಳೆದ ನಾಲ್ಕುದಿನಗಳಿಂದ ಸತತವಾಗಿ ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದ ಹಲವು ಕೆರೆ ಕಟ್ಟೆಗಳು ತುಂಬಿದ್ದರೆ, ಕೆಲವು ಒಡೆದು ಬಾರಿ ಅನಾಹುತ ಸೃಷ್ಟಿಸಿವೆ. ಶ್ರೀರಾಂಪುರ, ಬೋಗಾದಿ, ಹಿನಕಲ್, ವಿಜಯನಗರ 2ನೆ ಹಂತ, ಹನುಮಂತನಗರ, ಕ್ಯಾತಮಾರನಹಳ್ಳಿ, ಗೌಸಿಯಾ ನಗರ, ರಾಘವೇಂದ್ರ ನಗರ, ಸಯ್ಯಾಜಿರಾವ್ ರಸ್ತೆ, ಬನ್ನಿಮಂಟಪ, ಪಡುವಾರಹಳ್ಳಿ, ದೇವರಾಜ ಮಾರುಕಟ್ಟೆಗಳ ರಸ್ತೆಗಳು ಮತ್ತು  ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರಲ್ಲಿ ಆತಂಕ ಮೂಡಿಸಿದೆ.

ಇದಲ್ಲದೆ ಚಾಮುಂಡಿ ಬೆಟ್ಟದ ಕೆಳಗಿರುವ ಮಾಲ್ ಆಫ್ ಮೈಸೂರು, ವಸ್ತು ಪ್ರದರ್ಶನ ಸಂಪೂರ್ಣ ಜಲಾವೃತಗೊಂಡಿದ್ದು, ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಮಳಿಗೆಗೆಳು ಸಂಪೂರ್ಣ ಜಲಾವೃತಗೊಂಡಿದೆ. ದಸರಾ ಸಿದ್ಧತೆಯಲ್ಲಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ವಚ್ಛತಾ ಕಾರ್ಮಿಕರು ಎಲ್ಲಾ ಸ್ಥಳಗಳಿಗೂ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಂದ ನೀರು ಫಾಲ್ಸ್ ರೀತಿಯಲ್ಲಿ ಹರಿದು ಬರುತ್ತಿದೆ. ಲಲಿತಾದ್ರಿಪುರ ಗ್ರಾಮದ ಬಳಿ ಇರುವ ತಿಪ್ಪಯ್ಯನ ಕೆರೆ ತುಂಬಿ ಹರಿದಿದ್ದು, ಕಟ್ಟೆ ಒಡೆದು ನೀರು ಹೊರಗೆ ಬಂದಿದೆ. ಇತ್ತೀಚೆಗಷ್ಟೇ ಕೆರೆಯನ್ನು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಅಭಿವೃದ್ಧಿಪಡಿಸಿತ್ತು. ದಸರಾ ಆರಂಭದ ದಿನವೇ ಜಿಲ್ಲಾಧಿಕಾರಿ ತಿಪ್ಪಯ್ಯನ ಕರೆಯನ್ನು ಲೋಕಾರ್ಪಣೆ ಮಾಡಿದ್ದರು.

ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದಿದ್ದ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆಯ ರಭಸಕ್ಕೆ ನಗರಾದಾದ್ಯಂತ ಹಲವು ಮರಗಳು ಧರೆಗುರುಳಿ,ದ್ದು ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಿದೆ. 

ಮುಚ್ಚಿ ಹೋಗಿದ್ದ ರಾಜಕಾಲುವೆ ತೆರವಾದ ನಂತರ ಕೆರೆಗೆ ಕಸ ಕಡ್ಡಿ ತುಂಬಿದ್ದರಿಂದ ನೀರು ಸರಿಯಾಗಿ ಹೋಗಲು ಆಗದೆ ರಸ್ತೆಗಳಿಗೆ ನುಗ್ಗಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜನರ ಆತಂಕ ಹೆಚ್ಚಿಸಿದೆ.

ಬನ್ನಿಮಂಟಪದ ಜೋಡಿ ತೆಂಗಿನ ಮರ ರಸ್ತೆಯಲ್ಲಿರುವ ನರ್ಮ್ ಬಹು ಮಹಡಿ ವಸತಿ ಸಮುಚ್ಚಯದ ಕಾಂಪೌಂಡ್ ಕುಸಿದು ಬಿದ್ದಿದ್ದು, ಸಮುಚ್ಚಯದ 12 ಮನೆಗಳಿರುವ ಒಂದು ಬ್ಲಾಕ್ ಕುಸಿಯುವ ಭೀತಿ ಎದುರಾಗಿದೆ.

ಮನೆಗಳಿಗೆ ನುಗ್ಗಿದ ನೀರು ಹೊರ ಹಾಕಲು ಕೆಲವರು ರಾತ್ರಿಯಿಡೀ ಪ್ರಾಯಸ ಪಟ್ಟರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನು ಸಣ್ಣ ಪುಟ್ಟ ಮಕ್ಕಳೊಂದಿಗೆ ವಾಸವಿದ್ದ ಕೆಲವು ಕುಟುಂಬದವರು ನಿಸ್ಸಾಹಯಕರಾಗಿ ತಮ್ಮ ಮಕ್ಕಳನ್ನು ರಾತ್ರಿಯಿಡೀ ತಮ್ಮ ಬಳಿಯಲ್ಲಿಯೇ ತಬ್ಬಿಕೊಂಡು ಕಾಲಕಳೆದಿದ್ದಾರೆ. ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅವರನ್ನು ಭೂಟಿನ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ.

ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ: ಮಳೆ ಅವಾಂತರ ಪರಿಶೀಲಿಸಿ ಅಗತ್ಯ ಕ್ರಮವನ್ನು ಕೂಡಲೇ ವಹಿಸುವಂತೆ ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಬೇಟಿ, ಪರಿಶೀಲನೆ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಿ.ರಂದೀಪ್ ನೇತೃತ್ವದಲ್ಲಿ ಅಧಿಕಾರಿಗಳು ಜಲಾವೃತಗೊಂಡಿದ್ದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪಡುವಾರಹಳ್ಳಿ, ಬೋಗಾದಿ, ಆನಂದನಗರ, ಅರವಿಂದನಗರ, ಶ್ರೀರಾಂಪುರ, ಕನಕಗಿರಿ, ಎಲೆತೋಟ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ನಗರದಲ್ಲಿ 13 ಸೆಂಟಿ ಮೀಟರ್‍ನಷ್ಟು ದಾಖಲೆ ಮಳೆಯಾಗಿದೆ. ಮಳೆ ನೀರು ವಸತಿ ಪ್ರದೇಶಕ್ಕೆ ನುಗ್ಗಲು ಕಾರಣವಾದ ಅಂಶಗಳನ್ನು ಗಮನಿಸಿದ್ದೇವೆ. ಒತ್ತುವರಿ, ಅವೈಜ್ಞಾನಿಕ ಮೋರಿ ನಿರ್ಮಾಣ, ಹಾಗೂ ಕಾಲುವೆ ಮುಚ್ಚಿರುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಈ ಬಗ್ಗೆ ದಸರಾ ಮುಗಿದ ಮರು ದಿನದಿಂದಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕೆಲವಡೆ ಅಕ್ರಮವಾಗಿ ಕಾಲುವೆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇನ್ನು ಕೆಲವೆಡೆ ಒತ್ತುವರಿ ಆಗಿದೆ. ಈ ಬಗ್ಗೆ ಸಮಗ್ರ ಸರ್ವೇ ಮಾಡಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಆ ನಂತರ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಅವಶ್ಯಕತೆ ಇರುವ ಕಡೆ ಒತ್ತುವರಿ ತೆರವು ಮಾಲೇಬೇಕಾಗಿದೆ. ಜೊತೆಗೆ ಅಕ್ರಮವಾಗಿ ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜೆ.ಜಗದೀಶ್, ತಹಶೀಲ್ದಾರ್ ರಮೇಶ್ ಬಾಬು, ಅಧೀಕ್ಷಕ ಇಂಜಿನಿಯರ್ ಸುರೇಶ್ ಬಾಬು ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News