×
Ad

ತಾಲೂಕಿನ ಅತೀ ದೊಡ್ಡ ಯೋಜನೆಯಿಂದ ಸಾವಿರಾರು ಜನರಿಗೆ ಉದ್ಯೋಗ: ಸಿಎಂ ಸಿದ್ದರಾಮಯ್ಯ

Update: 2017-09-28 18:16 IST

ಪಾವಗಡ, ಸೆ.28: ಸುಮಾರು 12 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಎರಡು ಸಾವಿರ ಮೇಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಈ ಯೋಜನೆ ಈ ಭಾಗದಲ್ಲಿಯೇ ಅತೀ ದೊಡ್ಡ ಯೋಜನೆಯಾಗಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿ ತಿರುಮಣಿ ಸುತ್ತ ಮುತ್ತ ಕ್ರೆಡಿಲ್ ನಿರ್ಮಿಸುತ್ತಿರುವ ಎರಡು ಸಾವಿರ ಮೇಗಾ ವ್ಯಾಟ್ ಸೋಲಾರ್ ಪಾರ್ಕ್‍ನ ಪ್ರಗತಿ ಪರಿಶಿಲನೆ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ಯುವಕರಿಗೆ ಹಾಗೂ ರೈತರಿಗೆ ಉದ್ಯೋಗ ಅವಕಾಶ ಕಲ್ಪಿಸಲು ನಮ್ಮ ಸರಕಾರ ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಕಳೆದ 4 ವರ್ಷಗಳಿಂದ ಕಾಂಗ್ರೆಸ್ ಪಕ್ಷವೂ ಪ್ರಾಮಾಣಿಕವಾಗಿ ರೈತರಿಗೆ ಯಾವುದೇ ವಿಧವಾದ ಅಡಚಣೆಗಳನ್ನು ಉಂಟು ಮಾಡದೆ ರೈತರ ಆಶ್ವಾಸನೆಗಳನ್ನು ಸಂಪೂರ್ಣವಾಗಿ ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಭಾಗದ ರೈತರು ಬರಗಾಲದಿಂದ ತತ್ತರಿಸಿದರೂ, ಸೋಲಾರ್ ಪಾರ್ಕ್‍ಗೆ ಜಮೀನು ನೀಡಿರುವುದು ನನಗೆ ತುಂಬಾ ಸಂತೋಷ ಉಂಟುಮಾಡಿದೆ. ಜಮೀನು ನೀಡಿರುವ ರೈತರು 25 ವರ್ಷಗಳ ಕಾಲ ಯಾರ ಹಂಗು ಆರ್ಭಟವಿಲ್ಲದೆ ದಳ್ಳಾಳಿಗಳ ಕಾಟವಿಲ್ಲದೆ ತಮ್ಮ ತಮ್ಮ ಬ್ಯಾಂಕಿನ ಉಳಿತಾಯ ಖಾತೆಗಳಿಗೆ ಪ್ರತಿವರ್ಷ ಪ್ರತೀ ಎಕರೆಗೆ 21ಸಾವಿರ ಪಡೆಯುತ್ತಾರೆ. ಈಗಾಗಲೇ ಪ್ರತೀ ವರ್ಷ ಬಾಡಿಗೆ ಹಣದಲ್ಲಿ ಶೇ. 5 ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದರು.

ರೈತರ ಹಿತ ದೃಷ್ಟಿಯಿಂದ ಜಮೀನನ್ನು ಗತ್ತಿಗೆಗೆ ಪಡೆಯಲು ಪರಿಗಣಿಸಲಾಗಿದೆ. ಇದರಿಂದ ಅನಾವೃಷ್ಟಿ ಬರಡು ಭೂಮಿಯಲ್ಲೂ ರೈತರಿಗೆ ಲಾಭ ಬರುವಂತಾಗಿ ಜೀವ ನಿರ್ವಹಣೆ ಸುಗಮವಾಗಲಿದೆ ಎಂದ ಅವರು, ಒಣ ಪ್ರದೇಶದಲ್ಲಿ ನೀರಾವರಿಗೆ ನೀರಿನ ಕೊರತೆಯಿರುವುದರಿಂದ ರೈತರು ನಿರುದ್ಯೋಗದಿಂದ ತೊಂದರೆಗೆ ಒಳಗಾಗಿರುವುದು ನಮ್ಮ ಸರಕಾರದ ಗಮನಕ್ಕೆ ಬಂದಿದ್ದು, ಒಣ ಪ್ರದೇಶವಾದ ಪಾವಗಡ ತಾಲೂಕಿನಲ್ಲಿ ಸೌರ ವಿದ್ಯುತ್ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರ, ಲೋಕಸಭಾ ಸದಸ್ಯ ಬಿ.ಎನ್ ಚಂದ್ರಪ್ಪ, ಕ್ರಡಲ್ ಅಧ್ಯಕ್ಷ ಪಾಟಿಲ್, ಶಾಸಕ ತಿಮ್ಮರಾಯಪ್ಪ, ಮಾಜಿ ಸಚಿವ ವೆಂಕಟರವಣಪ್ಪ, ಮಾಜಿ ಶಾಸಕ ಸೋಮ್ಲಾ ನಾಯ್ಕ್, ಬ್ಯಾಡನೂರು ಕ್ಷೇತ್ರದ ಜಿಪಂ ಸದಸ್ಯೆ ಪಾವರ್ತಮ್ಮ  , ನಾಗಲಮಡಿಕೆಯ ಚನ್ನಮಲ್ಲಯ್ಯ, ಮಂಗಳವಾಡ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ ರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಸಿಇಒ ಕೆ.ಜಿ.ಶಾಂತರಾಮ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News