×
Ad

ಪಾವಗಡಕ್ಕೆ 2250 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ: ಸಿಎಂ ಸಿದ್ದರಾಮಯ್ಯ

Update: 2017-09-28 19:37 IST

ತುಮಕೂರು, ಸೆ.28: ತುಮಕೂರು, ಬಳ್ಳಾರಿ, ಚಿತ್ರದುರ್ಗ ಭಾಗದ ಪಾವಗಡ, ಕೂಡ್ಲಿಗಿ, ಚಳ್ಳಕೆರೆ, ಜಗಳೂರು, ಮೊಳಕಾಲ್ಮೂರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು 2250 ಕೋಟಿ ರೂ.ಗಳ ಬೃಹತ್ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ  ಆಯವ್ಯಯದಲ್ಲಿ ಸುಮಾರು 800 ಕೋಟಿ ರೂ. ಒದಗಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪಾವಗಡ ತಾಲೂಕಿನಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ 2000 ಮೇಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನಾ ಕಾಮಗಾರಿ ಪರಿಶೀಲಿಸಿದ ಬಳಿಕ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ,  ಇಡೀ ಕರ್ನಾಟಕವನ್ನು ಕತ್ತಲು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ನಮ್ಮ ಸರಕಾರದ ಸಂಕಲ್ಪ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಕಳೆದ 4 ವರ್ಷಗಳಲ್ಲಿ ಸತತ ಬರಗಾಲವನ್ನು ಎದುರಿಸುತ್ತಿದ್ದರೂ ರಾಜ್ಯದ ರೈತರಿಗೆ ಪ್ರತಿ ದಿನ 7 ಗಂಟೆಗಳ ನಿರಂತರ ವಿದ್ಯುತ್ ರೈತರಿಗೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಮಳೆಯ ಕೊರತೆಯಿಂದ ಈ ಭಾಗದ ರೈತರು ಬೆಳೆದ ಬೆಳೆ ಕೈ ಸೇರದೆ ತೊಂದರೆ ಅನುಭವಿಸಿರುವ ಹಿನ್ನೆಲೆಯಲ್ಲಿ ಅವರ ಹಿತದೃಷ್ಟಿಯಿಂದ ಜಮೀನನ್ನು ಸೌರಶಕ್ತಿ ವಿದ್ಯುತ್ ಉತ್ಪಾದನೆಗಾಗಿ ಗುತ್ತಿಗೆ ಆಧಾರದ  ಮೇಲೆ ಪಡೆಯಲಾಗಿದೆ. ಈ ಗುತ್ತಿಗೆ 31ನೆ ಮಾರ್ಚ್ 2044ರವರೆಗೆ ಅಂದರೆ 28 ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆಯಿಂದ ಅನಾವೃಷ್ಟಿಯ ಬರಡು ಭೂಮಿಯಲ್ಲೂ ರೈತರಿಗೆ ಲಾಭ ಬರುವಂತಾಗಿದೆ. ಅವರ ಜೀವನ ನಿರ್ವಹಣೆ ಸುಗಮವಾಗಲಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News