×
Ad

ಭಯದ ವಾತಾವರಣದಲ್ಲಿ ಗೋವಾ ಕನ್ನಡಿಗರು: ಎಚ್.ಡಿ.ದೇವೇಗೌಡ

Update: 2017-09-28 21:09 IST

ಹುಬ್ಬಳ್ಳಿ, ಸೆ.28: ಗೋವಾದಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಅತ್ಯಂತ ಖಂಡನೀಯ. ಭಯದ ವಾತಾವರಣದಲ್ಲಿ ಕನ್ನಡಿಗರು ಬದುಕುತ್ತಿದ್ದು, ಸ್ಲಂ ಲಾರ್ಡ್‌ಗಳಿಗೆ ಹಣ ನೀಡಿ ಬದುಕು ಸಾಗಿಸಬೇಕಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಮುಖ್ಯಮಂತ್ರಿ ಯಾರೇ ಆಗಿದ್ದರೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಕೇಂದ್ರ ಸರಕಾರವು ಇವರಿಗೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಹಿರಿಯ ಬಿಜೆಪಿ ನಾಯಕ ಯಶವಂತ್‌ ಸಿನ್ಹಾ ಕೇಂದ್ರ ವಿತ್ತ ಸಚಿವರಾಗಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಆರೆಸೆಸ್ಸ್ ಮುಖಂಡರು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು ಎಂದು ಹೇಳಿದರು.

ದೇಶದ ಅರ್ಥ ವ್ಯವಸ್ಥೆ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಧಾನಿ ನರೇಂದ್ರಮೋದಿಗೆ ಎಲ್ಲ ತಿಳಿದು ಕೊಳ್ಳುವ ಸಾಮರ್ಥ್ಯವಿದೆ. ಆದರೆ, ಆರ್ಥಿಕ ತಜ್ಞರ ಅಭಿಪ್ರಾಯವನ್ನು ಅವರು ಪರಿಗಣಿಸುತ್ತಿಲ್ಲ. ನೋಟುಗಳ ಅಮಾನ್ಯೀಕರಣದಿಂದ ಸಣ್ಣ ಕೈಗಾರಿಕೆ, ರೈತರು, ಹೈನುಗಾರಿಕೆ ಮೇಲೆ ಅಡ್ಡ ಪರಿಣಾಮ ಉಂಟಾಗಿದೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಚುನಾವಣೆಯಲ್ಲಿ ಜಾತ್ಯಾತೀತ ನಿಲುವು ಉಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ. ಡಿಸೆಂಬರ್‌ನೊಳಗೆ ಸಮನ್ವಯ ಸಮಿತಿ ರಚನೆಗೆ ಸೂಚನೆ ನೀಡಿದ್ದೇನೆ. ಮೇಯರ್ ಸ್ಥಾನದ ಬಗ್ಗೆ ನಾವು ಲಿಖಿತ ಒಪ್ಪಂದ ಮಾಡಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದು, ಯಾವುದೇ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News