ಸಚಿವೆ ಉಮಾಶ್ರೀ ಉಪಸ್ಥಿತಿಯಲ್ಲಿ ಅನಾಥೆ ಯುವತಿಯನ್ನು ವರಿಸಿದ ಯುವಕ
ಕಲಬುರಗಿ, ಸೆ.28: ಆಕೆ ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿ, ಕುಟುಂಬಸ್ಥರನ್ನು ಕಳೆದುಕೊಂಡಿದ್ದ ಅನಾಥೆ. ಯಾರೂ ದಿಕ್ಕಿಲ್ಲದೇ ಕಳೆದ ಹಲವು ವರ್ಷಗಳಿಂದ ರಾಜ್ಯ ಮಹಿಳಾ ನಿಲಯದಲ್ಲಿಯೇ ವಾಸವಾಗಿದ್ದಳು. ಅಲ್ಲಿಯೇ ಆಡಿ ಬೆಳೆದಿರುವ ಈ ಬಾಲೆಗೆ ಈಗ ಹದಿನೆಂಟು ವರ್ಷ ತುಂಬುತ್ತಿದ್ದಂತೆ ಯುವತಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ.
ಯುವಕನೋರ್ವ ಈಕೆಯನ್ನು ಮದುವೆ ಆಗುವ ಮೂಲಕ ಬಾಳು ನೀಡಿದ್ದಾನೆ. ಅವರಿಬ್ಬರ ಮದುವೆಗೆ ಸಚಿವೆ ಉಮಾಶ್ರೀ ಕೂಡ ಸಾಕ್ಷಿಯಾಗಿದ್ದಾರೆ. ಇಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಬೆಳೆದಿರುವ ಅನಾಥೆ ಪೂಜಾಳನ್ನು ಇಲ್ಲಿನ ನ್ಯೂ ರಾಘವೇಂದ್ರ ಕಾಲನಿ ನಿವಾಸಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿರುವ ರಾಘವೇಂದ್ರ ಹಿಂದೂ ಸಂಪ್ರದಾಯದಂತೆ ವರಿಸಿದ್ದಾನೆ.
ಪೂಜಾ ಮತ್ತು ರಾಘವೇಂದ್ರ ಮದುವೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಕೂಡ ಆಗಮಿಸಿ ವಧು-ವರರಿಗೆ ಆಶೀರ್ವದಿಸಿ ಜೊತೆಗೆ ಉಡುಗೊರೆಯನ್ನು ನೀಡಿ ಹಾರೈಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಚವೆ ಉಮಾಶ್ರೀ, ಮದುವೆ ಆಗಿ ಹೋಗುವ ಯುವತಿಯರ ಹೆಸರಿನಲ್ಲಿ ಕೇವಲ 20 ಸಾವಿರ ರೂ. ಮಾತ್ರ ಎಫ್‌ಡಿ ಇಡಲಾಗುತ್ತಿತ್ತು. ಅದನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದೆಂದು ಘೋಷಿಸಿದರು. ಇಷ್ಟು ದಿನ ಸಹೋದರಿಯಂತೆ ಇದ್ದಳು. ಈಗ ಆಕೆ ಮದುವೆ ಆಗಿಹೋಗಿರೋದು ಒಂದು ಕಡೆ ಖುಷಿ ನೀಡಿದರೆ ಇನ್ನೊಂದು ಕಡೆ ನೋವು ಆಗುತ್ತಿದೆ. ಅವಳ ನವಜೀವನ ಶುಭಮಯವಾಗಿರಲಿ ಅಂತ ಸಹಪಾಠಿಗಳು ಶುಭಹಾರೈಸಿದರೆ, ಮನೆ ಮಗಳನ್ನು ಗಂಡನ ಮನೆಗೆ ಕಳಿಸುತ್ತಿರುವ ಭಾವನೆ ಅಧಿಕಾರಿ ಸಿಬ್ಬಂದಿಗಳಲ್ಲಿ ಕಂಡುಬಂತು.