×
Ad

ಮದ್ಯದಂಗಡಿ ಪರವಾನಿಗೆ ಹಿಂಪಡೆಯುವಂತೆ ಪಾಲಿಬೆಟ್ಟ ನಾಗರಿಕರ ಒಕ್ಕೂಟ ಒತ್ತಾಯ

Update: 2017-09-28 23:31 IST

ಮಡಿಕೇರಿ, ಸೆ.28: ಪಾಲಿಬೆಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ರಸ್ತೆಯ ಬದಿಯಲ್ಲೇ ಮದ್ಯದಂಗಡಿ ಆರಂಭಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ ಎಂದು ಪಾಲಿಬೆಟ್ಟ ನಾಗರಿಕ ಒಕ್ಕೂಟದ ಸಂಚಾಲಕ ಎಂ.ಎಸ್.ಮೊಹಮ್ಮದ್ ಶಮೀಲ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಬೆಟ್ಟ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಮತ್ತೊಂದು ಮದ್ಯದಂಗಡಿ ಆರಂಭಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ. ಕೇವಲ 3 ರಿಂದ 4 ಸಾವಿರ ಜನಸಂಖ್ಯೆ ಹೊಂದಿರುವ ಪಾಲಿಬೆಟ್ಟದಲ್ಲಿ ಈ ರೀತಿ ನಾಯಿಕೊಡೆಗಳಂತೆ ಮದ್ಯದಂಗಡಿಗಳು ತಲೆ ಎತ್ತುತ್ತಿರುವುದು ಖಂಡನೀಯವೆಂದರು.

ಪಾಲಿಬೆಟ್ಟ ವ್ಯಾಪ್ತಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಿರುವಾಗ ರಸ್ತೆ ಬದಿಯಲ್ಲೆ ನೂತನ ಮದ್ಯದಂಗಡಿ ಆರಂಭಕ್ಕೆ ಅವಕಾಶವನ್ನು ನೀಡಿದಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅನುಮತಿ ಹಿಂಪಡೆಯುವಂತೆ ಉಪ ಅಬಕಾರಿ ಅಯುಕ್ತರಿಗೆ ನಾಗರಿಕ ಒಕ್ಕೂಟ ಮನವಿ ಸಲ್ಲಿಸಿದ್ದು, ವಾರದ ಒಳಗಾಗಿ ಅನುಮತಿ ಹಿಂಪಡೆಯದಿದ್ದಲ್ಲಿ ಸ್ತ್ರೀ ಶಕ್ತಿ, ಸ್ವಸಹಾಯ ಸಂಘ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಪಾಲಿಬೆಟ್ಟ ನಾಗರಿಕ ಒಕ್ಕೂಟದ ಸದಸ್ಯರಾದ ಕೆ.ಎ. ಅಬ್ದುಲ್ ರಶೀದ್, ಟಿ.ಯು. ಲೀಲ, ಜಯಮ್ಮ ವೆಂಕಟೇಶ್, ಎಂ.ಬಿ. ಅಬ್ದುಲ್ ನಾಸೀರ್ ಹಾಗೂ ನಸೀಮಾ ಮೊಯ್ದು ಉಪಸ್ಥಿತರಿದ್ದರು.  





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News