×
Ad

ಕಲ್ಲುಗಣಿಯಲ್ಲಿ ಸ್ಫೋಟ: ಕಾರ್ಮಿಕ ಮೃತ್ಯು

Update: 2017-09-29 00:31 IST

ಮಂಡ್ಯ, ಸೆ.28: ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಬುಧವಾರ ಮದ್ಯಾಹ್ನ ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಕುಳಿಯೊಳಗೆ ಅಮೋನಿಯಂ ನೈಟ್ರೇಟ್ ತುಂಬಿ ಜಿಲೆಟಿನ್ ಕಡ್ಡಿ ಸಿಕ್ಕಿಸುವ ಸಂದರ್ಭ ಆಕಸ್ಮಿಕ ಸ್ಫೋಟಗೊಂಡ ಪರಿಣಾಮ ಗಣಿ ಕಾರ್ಮಿಕ ಸಾವನ್ನಪ್ಪಿದ್ದಾರೆ.

ನಾರಾಯಣ  ಸಾವನ್ನಪ್ಪಿದ ಕಾರ್ಮಿಕನಾಗಿದ್ದು,  ಈತನ ಪತ್ನಿ ಸಣ್ಣ ರಾಜಮ್ಮ ಗುರುವಾರ  ನೀಡಿದ ದೂರಿನ ಹಿನ್ನೆಲೆಯಲ್ಲಿ ಕಲ್ಲುಗಣಿಗಾರಿಕೆ  ಮಾಲಕ ಸುದರ್ಶನ ಎಂಬುವರ ವಿರುದ್ಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತ ನಾರಾಯಣ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕು ರಾಮಾಪುರ ಬಳಿಯ ಎ.ವಿಲೇಜ್ ಗ್ರಾಮದವರು. ಈತ ಹಲವಾರು ವರ್ಷದಿಂದ ಗಣಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮೃತ ನಾರಾಯಣನಿಗೆ ಇಬ್ಬರು ಮಕ್ಕಳು ಇದ್ದಾರೆ.

ಘಟನೆಯಲ್ಲಿ  ತೀವ್ರವಾಗಿ ಗಾಯಗೊಂಡಿರುವ ಶಂಭು ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ಈತನನ್ನು ಮೈಸೂರಿನ ಹೋಲ್ಡ್ಸ್‍ವರ್ತ್ ಮೇಮೋರಿಯಲ್ ಮಿಷನ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮತ್ತೊಬ್ಬ ಗಾಯಾಳು ಲೋಕೇಶ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

ತಾಲೂಕಿನಲ್ಲಿ ಗಣಿಗಾರಿಕೆ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಬೆನ್ನಲೆ ಸ್ಫೋಟಕದಿಂದ ಗಣಿ ಕಾರ್ಮಿಕ ಮೃತಪಟ್ಟ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು,  ಗುರುವಾರ ರೈತಸಂಘ  ಮತ್ತು ಬಿಜೆಪಿ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಸ್ಫೋಟಕದಿಂದ ಮೃತಪಟ್ಟ ನಾರಾಯಣ, ಲಾರಿಗೆ ಸಿಲುಕಿ ಮೃತಪಟ್ಟ ಎಂದು ಪ್ರಕರಣ ತಿರುಚುವ ಪ್ರಯತ್ನವೂ ನಡೆಯಿತು. ಈ ಬಗ್ಗೆ ಮೃತನ ಪತ್ನಿ ಮತ್ತು ಭೋವಿ ಜನಾಂಗದ ಮುಖಂಡರ ನಡುವೆ ಮೈಸೂರಿನಲ್ಲಿ ಮಾತುಕತೆ ಸಹ ನಡೆದು ರಾಜಿ ವಿಫಲವಾದ ಹಿನ್ನಲೆಯಲ್ಲಿ ನಾರಾಯಣನ ಪತ್ನಿ ಸಣ್ಣ ರಾಜಮ್ಮ ದೂರು ದಾಖಲಿಸಿದರು.

ಸ್ಥಳಕ್ಕೆ ಮಂಡ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಲಾವಣ್ಯ, ಡಿವೈಎಸ್‍ಪಿ ವಿಶ್ವನಾಥ್ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News