ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅ.2ಕ್ಕೆ ರಾಜ್ಯಕ್ಕೆ ಆಗಮನ
ಬೆಂಗಳೂರು, ಸೆ. 30: ಮಂಗಳೂರಿನಲ್ಲಿ ನಡೆಯಲಿರುವ ಪಕ್ಷದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಕ್ಟೋಬರ್ 2ರಂದು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಲಿದ್ದು, 2 ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದ್ದಾರೆ.
ಹೊಸದಿಲ್ಲಿಯಿಂದ ಅ.2ರ ಸಂಜೆ 6 ಗಂಟೆಯ ಸುಮಾರಿಗೆ ಮಂಗಳೂರಿಗೆ ಆಗಮಿಸುವ ಅಮಿತ್ ಶಾ, ವಿಮಾನ ನಿಲ್ದಾಣದಿಂದ ತಲಪಾಡಿಯವರೆಗೂ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಅವರು ರಾತ್ರಿ ಕೇರಳಕ್ಕೆ ತೆರಳಿದ್ದಾರೆ.
ಅ.3ಕ್ಕೆ ಕೇರಳದಲ್ಲಿ ನಡೆಯುವ ಬಿಜೆಪಿ ಪಕ್ಷದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅದೇ ದಿನ ಸಂಜೆ ಮಂಗಳೂರಿಗೆ ಆಗಮಿಸಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅ.4ರಂದು ಅಮಿತ್ ಶಾ, ಮಂಗಳೂರಿನಲ್ಲಿ ನಡೆಯುವ ಬಿಜೆಪಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಅಲ್ಲದೆ, ಅದೇ ದಿನ ಸಂಜೆ ನಡೆಯುವ ಮಂಗಳೂರಿನ ವಿವಿಧ ವಲಯಗಳ ಗಣ್ಯರೊಂದಿಗೆ ಅವರು ಚರ್ಚೆ ನಡೆಸಲಿದ್ದು, ಈ ಸಭೆಯಲ್ಲಿ ಮಂಗಳೂರಿನ ವಕೀಲರು, ವೈದ್ಯರು, ಎಂಜಿನಿಯರ್‌ಗಳು, ಸಮಾಜ ಸೇವಕರು ಸೇರಿದಂತೆ ಇನ್ನಿತರ ವಲಯದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.