×
Ad

‘ನಿರಾಶ್ರಿತ ಕನ್ನಡಿಗರಿಗೆ ಕೂಡಲೇ ಪುನರ್ ವಸತಿ ಕಲ್ಪಿಸಿ’ : ಗೋವಾ ಸಿಎಂ ಪರಿಕ್ಕರ್‌ಗೆ ಜಗದೀಶ್ ಶೆಟ್ಟರ್ ಪತ್ರ

Update: 2017-09-30 18:45 IST

ಬೆಂಗಳೂರು, ಸೆ. 30: ಗೋವಾದ ಬೈನಾ ಕಡಲು ತೀರದಲ್ಲಿದ್ದ ಕನ್ನಡಿಗರ 55 ಮನೆಗಳನ್ನು ಏಕಾಏಕಿ ತೆರವುಗೊಳಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿರುವ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಿರಾಶ್ರಿತ ಕನ್ನಡಿಗರಿಗೆ ಕೂಡಲೇ ಪುನರ್ ವಸತಿ ಕಲ್ಪಿಸಬೇಕೆಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಆಗ್ರಹಿಸಿದ್ದಾರೆ.

ಬೈನಾ ಕಡಲ ಕಿನಾರೆಯಲ್ಲಿ ಕಳೆದ 40 ವರ್ಷಗಳಿಂದ ನೆಲೆಸಿದ್ದ ಕನ್ನಡಿಗರು, ಗೋವಾದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರ ಶ್ರಮದಾಯಕ ಕೆಲಸ-ಕಾರ್ಯಗಳಿಂದ ಗೋವಾದ ಮೂಲ ನಿವಾಸಿಗಳಿಗೆ ನೆರವಾಗಿದ್ದಾರೆ ಎಂದು ಜಗದೀಶ್ ಶೆಟ್ಟರ್ ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗದಗ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಗೋವಾದಲ್ಲಿ ನೆಲೆಸಿದ್ದು, ಗೋವಾ ರಾಜ್ಯದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೈನಾ ಕಡಲ ತೀರದಲ್ಲಿ ವಾಸ ಮಾಡುತ್ತಿದ್ದ ಕನ್ನಡಿಗರು ಸ್ಥಳೀಯ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಹೊಂದಿದ್ದಾರೆ. 15ಲಕ್ಷ ಗೋವಾ ಜನಸಂಖ್ಯೆಯ ಪೈಕಿ ಕನ್ನಡಿಗರೇ 3ಲಕ್ಷಕ್ಕೂ ಅಧಿಕ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ನಿರಾಶ್ರಿತ ಕನ್ನಡಿಗರಿಗೆ ಕೂಡಲೇ ಪುನರ್ ವಸತಿಕಲ್ಪಿಸಬೇಕು ಎಂದು ಪತ್ರ ಮುಖೇನ ಶೆಟ್ಟರ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News